2022ರ ಐಪಿಎಲ್ ಟೂರ್ನಿ ಭಾರತದಿಂದ ಶಿಫ್ಟ್ ಆಗುತ್ತಾ ?
15ನೇ ಆವೃತ್ತಿಯ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆಸಬೇಕಾ ? ಅಥವಾ ಕಳೆದ ಎರಡು ಆವೃತ್ತಿಯಂತೆ ಯುಎಇಗೆ ಶಿಫ್ಟ್ ಮಾಡಬೇಕಾ ? ಈ ಪ್ರಶ್ನೆಗಳು ಈಗ ಬಿಗ್ ಬಾಸ್ ಬಿಸಿಸಿಐಯನ್ನು ಕಾಡುತ್ತಿದೆ.
ಹೌದು, ಭಾರತದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮೂರನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐಗೆ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡೋದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬಗ್ಗೆ ಬಿಸಿಸಿಐ ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಐಪಿಎಲ್ ಫ್ರಾಂಚೈಸಿಗಳ ಜೊತೆ ವರ್ಚುವಲ್ ಸಭೆಯನ್ನು ಶನಿವಾರ ನಡೆಸಲಿದೆ.
ಈ ವರ್ಚುವಲ್ ಸಭೆಯಲ್ಲಿ ಐಪಿಎಲ್ ಆಯೋಜನೆಯ ಬಗ್ಗೆ ಚರ್ಚೆ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಬಿಸಿಸಿಐ ಮತ್ತು ಐಪಿಎಲ್ ಗರ್ವನಿಂಗ್ ಕೌನ್ಸಿಲ್ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.
ಇನ್ನು ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಏಪ್ರಿಲ್ ಮತ್ತು ಮೇ ನಲ್ಲಿ ಸಂಘಟಿಸಲು ಬಿಸಿಸಿಐ ತೀರ್ಮಾನಿಸಿದೆ. ಈ ಬಾರಿಯ ಐಪಿಎಲ್ ನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಲಿದೆ.
2020ರ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯುಎಇನಲ್ಲಿ ಪೂರ್ಣ ಪ್ರಮಾಣದಲ್ಲಿ ಆಯೋಜನೆ ಮಾಡಿತ್ತು. ಹಾಗೇ 2021ರ ಐಪಿಎಲ್ ನಲ್ಲಿ ಭಾರತದಲ್ಲಿ ಆಯೋಜನೆ ಮಾಡಿತ್ತು. ಆದ್ರೆ ಕೋವಿಡ್ ಸೋಂಕು ಹೆಚ್ಚಳದಿಂದಾಗಿ ಅರ್ಧದಲ್ಲೇ ಮೊಟಕುಗೊಳಿಸಲಾಗಿತ್ತು. ಬಳಿಕ ಎರಡನೇ ಭಾಗವಾಗಿ ಯುಎಇನಲ್ಲಿ ಸಂಘಟಿಸಲಾಗಿತ್ತು.
ಹೀಗಾಗಿ ಬಿಸಿಸಿಐ ಈ ಬಾರಿ ಭಾರತದಲ್ಲಿ ಆಯೋಜನೆ ಮಾಡಬೇಕಾ ಅಥವಾ ಮತ್ತೆ ಯುಎಇಗೆ ಶಿಫ್ಟ್ ಮಾಡಬೇಕಾ ಎಂಬುದರ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.