ಅಹಮದಾಬಾದ್ ಗೆ ಹಾರ್ದಿಕ್ ಸಾರಥಿ.. ಲಕ್ನೋ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕ…!
15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ಭರದಿಂದ ಸಿದ್ಧವಾಗುತ್ತಿವೆ. ಈಗಾಗಲೇ ಹೊಸದಾಗಿ ಸೇರ್ಪಡೆಗೊಂಡಿರುವ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ತಮ್ಮ ಮೂಲ ಆಟಗಾರರನ್ನು ಖರೀದಿ ಮಾಡಿಕೊಂಡಿವೆ.
ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಅಹಮದಾಬಾದ್ ತಂಡವನ್ನು ಮುನ್ನಡೆಸಲಿದ್ದಾರೆ. ಅಹಮದಾಬಾದ್ ತಂಡ ಹಾರ್ದಿಕ್ ಪಾಂಡ್ಯ ಅವರಿಗೆ 15 ಕೋಟಿ ರೂಪಾಯಿ ನೀಡಲಿದೆ. ಹಾಗೇ ರಶೀದ್ ಖಾನ್ ಅವರನ್ನು ಕೂಡ 15 ಕೋಟಿಗೆ ಒಪ್ಪಂದ ಮಾಡಿಕೊಂಡಿದೆ. ಇನ್ನು ಟೀಮ್ ಇಂಡಿಯಾದ ಯುವ ಆಟಗಾರ ಶುಭ್ಮನ್ ಗಿಲ್ ಜೊತೆ 8 ಕೋಟಿಗೆ ಒಪ್ಪಂದ ಮಾಡಿಕೊಳ್ಳಳಾಗಿದೆ.
ಇನ್ನು ಲಕ್ನೋ ತಂಡಕ್ಕೆ ಕೆ.ಎಲ್. ರಾಹುಲ್ ನಾಯಕನಾಗಿದ್ದಾರೆ. ಕೆ.ಎಲ್. ರಾಹುಲ್ ಲಕ್ನೋ ತಂಡದ ಜೊತೆ 17 ಕೋಟಿ ರೂಪಾಯಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗೇ ಮಾರ್ಕಸ್ ಸ್ಟೋನಿಸ್ 9.2 ಕೋಟಿ ಹಾಗೂ ರವಿ ಬಿಷ್ಣೋಯ್ 4 ಕೋಟಿ ರೂಪಾಯಿಗೆ ಲಕ್ನೋ ತಂಡದ ಪಾಲಾಗಿದ್ದಾರೆ.
ಲಕ್ನೋ ತಂಡಕ್ಕೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಗೌತಮ್ ಗಂಭೀರ್ ಮೆಂಟರ್ ಆಗಿ ಈಗಾಗಲೇ ನೇಮಕಗೊಂಡಿದ್ದಾರೆ. ಆಂಡಿ ಫ್ಲವರ್ ತಂಡದ ಹೆಡ್ ಕೋಚ್ ಆಗಿದ್ದಾರೆ.
ಇನ್ನು ಅಹಮದಾಬಾದ್ ತಂಡಕ್ಕೆ ವಿಕ್ರಮ್ ಸೋಲಂಕಿ ಅವರು ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಗ್ಯಾರಿ ಕಸ್ಟರ್ನ್ ಅವರು ಬ್ಯಾಟಿಂಗ್ ಕೋಚ್ ಹಾಗೂ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾದ ಮಾಜಿ ವೇಗಿ ಆಶೀಷ್ ನೆಹ್ರಾ ಅವರು ಹೆಡ್ ಕೋಚ್ ಆಗಿದ್ದಾರೆ.
ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ತಮ್ಮ ಮೂಲ ಆಟಗಾರರ ಪಟ್ಟಿಯನ್ನು ಜನವರಿ 22ರಂದು ಬಿಸಿಸಿಐಗೆ ಸಲ್ಲಿಕೆ ಮಾಡಲಿವೆ.
ಕಳೆದ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದರು. ಹಾಗೇ ಶುಬ್ಮನ್ ಗಿಲ್ ಕೆಕೆಆರ್, ರಶೀದ್ ಖಾನ್ ಎಸ್ ಆರ್ ಎಚ್ ಹಾಗೂ ಮಾರ್ಕಸ್ ಸ್ಟೋನಿಸ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರವಿಬಿಷ್ಣೋಯ್ ಮತ್ತು ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅದ್ರಲ್ಲೂ ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿದ್ದರು.