ಯು-ಮುಂಬಾದ ಜಯದ ಖಾತೆ ಓಪನ್
ಆಲ್ರೌಂಡ್ ಪ್ರದರ್ಶನ ತೋರಿದ ಯು ಮುಂಬಾ ತಂಡ ಯುಪಿ ಯೋಧಾಸ್ ವಿರುದ್ಧದ ಪಂದ್ಯದಲ್ಲಿ 30-23 ಅಂತರದಲ್ಲಿ ಗೆದ್ದು, ಜಯದ ಖಾತೆ ತೆರೆದಿದೆ. ಮೊದಲ ಪಂದ್ಯದಲ್ಲಿ ಯು ಮುಂಬಾ ತಂಡ ಡಬಾಂಗ್ ಡೆಲ್ಲಿ ವಿರುದ್ಧ ಸೋಲನುಭವಿಸಿತ್ತು.
ಪ್ರಥಮಾರ್ಧದಲ್ಲಿ 14-9 ಅಂತರದಲ್ಲಿ ಮುನ್ನಡೆದ ಯು ಮುಂಬಾ ದ್ವಿತಿಯಾರ್ಧಲ್ಲೂ ಆ ಮುನ್ನಡೆಯನ್ನು ಕಾಯ್ದುಕೊಂಡಿತು. ಸುರೀಂದರ್ ಸಿಂಗ್ ನಾಯಕತ್ವದ ಯು ಮುಂಬಾ ತಂಡದ ಪರ ರೈಡರ್ ಜೈ ಭಗವಾನ್ 6 ಅಂಕಗಳನ್ನು ಗಳಿಸಿ ಯಶಸ್ವಿ ರೈಡರ್ ಎನಿಸಿದರು. ರಿಂಕು ಹಾಗೂ ಕಿರಣ್ ಮಗರ್ ಟ್ಯಾಕಲ್‌ನಲ್ಲಿ ತಲಾ 3 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಗುಮಾನ್ ಸಿಂಗ್ (5) ಅವರು ಕೂಡ ರೈಡಿಂಗ್‌ನಲ್ಲಿ ಮಿಂಚಿ ತಂಡದ ಜಯಕ್ಕೆ ನೆರವಾದರು. ಟ್ಯಾಕಲ್‌ನಲ್ಲಿ ಯುಮುಂಬಾ 14 ಅಂಕಗಳನ್ನು ಗಳಿಸಿದ್ದು ಯು ಪಿ ಯೋಧಾಶ್ ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.
ಯುಪಿ ಯೋಧಾ ತಂಡದ ಅನುಭವಿ ಆಟಗಾರ ಪ್ರದೀಪ್ ನರ್ವಾಲ್ ರೈಡಿಂಗ್‌ನಲ್ಲಿ ಯಶಸ್ಸು ಕಾಣಲಿಲ್ಲ. ಮಾಡಿದ 18 ರೈಡಿಂಗ್‌ನಲ್ಲಿ ಅವರು ಗಳಿಸಿದ್ದು ಕೇವಲ 5 ಅಂಕ. ಸಾಮಾನ್ಯವಾಗಿ ದ್ವಿತಿಯಾರ್ಧಲ್ಲಿ ತನ್ನ ನೈಜ ಆಟವನ್ನು ಪ್ರದರ್ಶಿಸುವ ನರ್ವಾಲ್ ಯು ಮುಂಬಾ ವಿರುದ್ಧ ಚೇತರಿಸಿಕೊಳ್ಳಲಿಲ್ಲ. ಅಶು ಸಿಂಗ್ ಹಾಗೂ ಸುಮಿತ್ ಟ್ಯಾಕಲ್‌ನಲ್ಲಿ ಒಟ್ಟು ಗಳಿಸಿದ 8 ಅಂಕಗಳು ಸೋಲಿನ ಅಂತರವನ್ನು ಕಡಿಮೆ ಮಾಡಿತು. ತಂಡವೊಂದು ಒಬ್ಬ ಆಟಗಾರನನ್ನೇ ನೆಚ್ಚಿಕೊಂಡಿರಬಾರದು ಎಂಬ ಸಂದೇಶವನ್ನೂ ಈ ಪಂದ್ಯ ಸಾರಿತು.
Pro Kabaddi, U Mumba, UP Yodhas , victory