ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(3/17) ಪರಿಣಾಮಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್, ಐಪಿಎಲ್ 2022ಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 130 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸಂಜೂ ಸ್ಯಾಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವೈಫಲ್ಯ ಕಂಡ ರಾಜಸ್ಥಾನ್, 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್‌ಗಳಿಸಿತು. ರಾಯಲ್ಸ್ ಪರ ಬಟ್ಲರ್(39), ಜೈಸ್ವಾಲ್(22) ಉಪಯುಕ್ತ ರನ್‌ಗಳಿಸಿ ತಂಡಕ್ಕೆ ಆಸರೆಯಾದರು.

ರಾಯಲ್ಸ್ ಬ್ಯಾಟಿಂಗ್ ವೈಫಲ್ಯ:
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ 22(16) ಬಿರುಸಿನ ಆಟವಾಡಿ ಹೊರ ನಡೆದರೆ. ಭರ್ಜರಿ ಫಾರ್ಮ್‌ನಲ್ಲಿರುವ ಜಾಸ್ ಬಟ್ಲರ್ 39(35) ಉಪಯುಕ್ತ ರನ್‌ಗಳಿಸಿ ಹೊರ ನಡೆದರು. ಆದರೆ ಮೊದಲ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜೂ ಸ್ಯಾಮ್ಸನ್(14) ಹಾಗೂ ದೇವದತ್ ಪಡಿಕ್ಕಲ್(2) ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ಪರಿಣಾಮ ರಾಜಸ್ಥಾನ್ 79 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳ ವಿಕೆಟ್ ಪತನದ ನಂತರ ಮಧ್ಯಮ ಕ್ರಮಾಂಕದಲ್ಲಿ ಬಂದ ಶಿಮ್ರಾನ್ ಹೆಟ್ಮಾಯೆರ್(11) ರನ್‌ಗಳಿಸಿ ಔಟಾದರೆ. ಇವರ ಬೆನ್ನಲ್ಲೇ ಆರ್. ಅಶ್ವಿನ್(6) ಸಿಕ್ಸರ್ ಹೊಡೆಯುವ ಯತ್ನದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಟ್ರೆಂಟ್ ಬೋಲ್ಟ್(11), ರಿಯಾನ್ ಪರಾಗ್(15) ಹಾಗೂ ಮೆಕಾಯ್(8) ಅಲ್ಪಮೊತ್ತಗಳಿಸಿ ಹೊರನಡೆದರು.

ಹಾರ್ದಿಕ್ ಭರ್ಜರಿ ಬೌಲಿಂಗ್:
ಟಾಸ್ ಸೋತು ಬೌಲಿಂಗ್ ಅವಕಾಶ ಪಡೆದ ಗುಜರಾತ್ ಟೈಟನ್ಸ್, ಇನ್ನಿಂಗ್ಸ್ ಆರಂಭದಿಂದಲೇ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದರು. ಪ್ರಮುಖವಾಗಿ ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ(3/17) ಚಾಣಾಕ್ಷ ಬೌಲಿಂಗ್ ದಾಳಿ ನಡೆಸಿದರು. ಶಿಸ್ತುಬದ್ಧ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್, ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರೆ. ಸಾಯಿ ಕಿಶೋರ್(2/20), ರಶೀದ್ ಖಾನ್(1/18), ಯಶ್ ದಯಾಳ್(1/18) ಹಾಗೂ ಮೊಹಮ್ಮದ್ ಶಮಿ(1/33) ನಾಯಕನಿಗೆ ಉತ್ತಮ ಸಾಥ್ ನೀಡಿದರು.