ಆರಂಭಿಕರಾದ ಪೃಥ್ವಿ ಶಾ(51) ಹಾಗೂ ಡೇವಿಡ್ ವಾರ್ನರ್(61) ಅವರುಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 215 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಮುಂಬೈನ ಬ್ರೆಬೌರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಕೆಕೆಆರ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 215 ರನ್ ಕಲೆಹಾಕಿತು. ಡೆಲ್ಲಿ ಪರ ಪೃಥ್ವಿ ಶಾ(51) ಹಾಗೂ ಡೇವಿಡ್ ವಾರ್ನರ್(61) ಜವಾಬ್ದಾರಿಯುತ ಆಟವಾಡಿದರು.
ವಾರ್ನರ್-ಪೃಥ್ವಿ ಅಬ್ಬರ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ಗೆ ಆರಂಭಿಕರು ಆಸರೆಯಾದರು. ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ 51 ರನ್(29 ಬಾಲ್, 7 ಬೌಂಡರಿ, 2 ಸಿಕ್ಸ್) ಹಾಗೂ ಡೇವಿಡ್ ವಾರ್ನರ್ 61 ರನ್(45 ಬಾಲ್, 6 ಬೌಂಡರಿ, 2 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಕೆಆರ್ ಬೌಲರ್ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಜೋಡಿ, ಮೊದಲ ವಿಕೆಟ್ಗೆ 93 ರನ್ಗಳ ಅತ್ಯುತ್ತಮ ಆರಂಭ ಒದಗಿಸಿದರು.
ನಂತರ ಬಂದ ನಾಯಕ ರಿಷಬ್ ಪಂತ್ 27 ರನ್(14 ಬಾಲ್, 2 ಬೌಂಡರಿ, 2 ಸಿಕ್ಸ್) ಬಿರುಸಿನ ಆಟವಾಡಿದರು. ಆದರೆ ನಂತರ ಕಣಕ್ಕಿಳಿದ ಲಲಿತ್ ಯಾದವ್(1) ಹಾಗೂ ರೋವ್ಮನ್ ಪೊವೆಲ್(8) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಹೀಗಾಗಿ ಒಂದು ಹಂತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್, ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ 6ನೇ ವಿಕೆಟ್ಗೆ ಜೊತೆಯಾದ ಅಕ್ಸರ್ ಪಟೇಲ್ 22*(14) ಹಾಗೂ ಶಾರ್ದೂಲ್ ಥಾಕೂರ್ 29*(11) ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 49 ರನ್ಗಳ ಜೊತೆಯಾಟದಿಂದ ತಂಡದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.
ಕೆಕೆಆರ್ ಪರ ಸುನೀಲ್ ನರೈನ್ (2/21), ಉಮೇಶ್ ಯಾದವ್, ಆಂಡ್ರೆ ರಸೆಲ್ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.