ಜವಾಬ್ದಾರಿಯ ಆಟವಾಡಿದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್(92*) ಹಾಗೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋವ್ಮನ್ ಪೋವೆಲ್(67*) ಅವರ ಶತಕದ ಜೊತೆಯಾಟದ ನೆರವಿನಿಂದ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 207 ರನ್‌ಗಳ ಬೃಹತ್ ಮೊತ್ತಗಳಿಸಿದೆ.

ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದ್ರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್‌ಗಳಿಸಿತು. ಡೆಲ್ಲಿ ಪರ ವಾರ್ನರ್ 92* ಹಾಗೂ ಪೋವೆಲ್ 67 ಭರ್ಜರಿ ಆಟವಾಡಿದರು.

ವಾರ್ನರ್ ಅಬ್ಬರದ ಆಟ:
ಮೊದಲು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಮಂದೀಪ್ ಸಿಂಗ್(0) ವಿಕೆಟ್ ಕಳೆದುಕೊಂಡಿತು. ನಂತರ ಬಂದ ಮಿಚೆಲ್ ಮಾರ್ಷ್(10) ನಿರೀಕ್ಷಿತ ಆಟವಾಡಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ವಾರ್ನರ್ ಹಾಗೂ ರಿಷಬ್ ಪಂತ್(26) ಉತ್ತಮ ಬ್ಯಾಟಿಂಗ್‌ನಿಂದ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ನೆಲಕಚ್ಚಿ ಆಟವಾಡಿದ ಡೇವಿಡ್ ವಾರ್ನರ್ 92* ರನ್(58 ಬಾಲ್, 12 ಬೌಂಡರಿ, 3 ಸಿಕ್ಸ್) ತಂಡಕ್ಕೆ ಬೆನ್ನೆಲುಬಾದರು.

ಪೋವೆಲ್ ಭರ್ಜರಿ ಆಟ:
ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ರೋವ್ಮನ್ ಪೋವೆಲ್ 67* ರನ್(35 ಬಾಲ್, 3 ಬೌಂಡರಿ, 6 ಸಿಕ್ಸ್) ಸಹ ಭರ್ಜರಿ ಬ್ಯಾಟಿಂಗ್ ಮೂಲಕ ಐಪಿಎಲ್ ಟೂರ್ನಿಯ ಚೊಚ್ಚಲ ಅರ್ಧಶತಕ ಸಿಡಿಸಿದರು. ಹೈದ್ರಾಬಾದ್ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ ಅದ್ಭುತ 122(66) ರನ್‌ಗಳ ಜೊತೆಯಾಟವಾಡಿ ಅಬ್ಬರಿಸಿದರು. ಕೊನೆ ಹಂತದವರೆಗೂ ಜವಾಬ್ದಾರಿಯ ಆಟವಾಡಿದ ಇವರಿಬ್ಬರು ತಂಡದ ಮೊತ್ತವನ್ನು 200 ರನ್‌ಗಳ ಗಡಿದಾಟಿಸಿದರು. ಸರ್‌ರೈಸರ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಭುವನೇಶ್ವರ್ ಕುಮಾರ್(1/25), ಸೆನ್ ಅಬ್ಬೋಟ್(1/47), ಶ್ರೇಯಸ್ ಗೋಪಾಲ್(1/34) ಉತ್ತಮ ಬೌಲಿಂಗ್ ದಾಳಿ ನಡೆಸಿದರು.