ಆರಂಭಿಕ ಬ್ಯಾಟ್ಸ್ಮನ್ಗಳ ವೈಫಲ್ಯದ ನಡುವೆಯೂ ಶಿಮ್ರಾನ್ ಹೆಟ್ಮಾಯೆರ್(59*) ಸ್ಪೋಟಕ ಅರ್ಧಶತಕ ಹಾಗೂ ಆರ್. ಅಶ್ವಿನ್(28) ಜವಾಬ್ದಾರಿಯ ಆಟದಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 165 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 165 ರನ್ಗಳಿಸಿತು. ರಾಜಸ್ಥಾನ್ ಪರ ಹೆಟ್ಮಾಯೆರ್(59*) ಹಾಗೂ ಅಶ್ವಿನ್(28) ಉತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.
ರಾಯಲ್ಸ್ ಬ್ಯಾಟಿಂಗ್ ವೈಫಲ್ಯ:
ಮೊದಲು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಸೆಂಚುರಿ ಸ್ಟಾರ್ ಜಾಸ್ ಬಟ್ಲರ್(18) ಬಹುಬೇಗನೆ ನಿರ್ಗಮಿಸಿದರೆ. ನಾಯಕ ಸಂಜೂ ಸ್ಯಾಮ್ಸನ್(13) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಾಯಕನ ಬೆನ್ನಲ್ಲೇ ವ್ಯಾನ್ ದರ್ ದುಸೇನ್(3) ಕೂಡ ಪೆವಿಲಿಯನ್ ಸೇರಿದರು. ಆದರೆ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ದೇವದತ್ ಪಡಿಕ್ಕಲ್ 29 ರನ್ಗಳ ಉಪಯುಕ್ತ ರನ್ಗಳಿಸಿದರು.
ಹೆಟ್ಮಾಯೆರ್-ಅಶ್ವಿನ್ ಚೇತರಿಕೆ:
ಕೇವಲ 67 ರನ್ಗಳಿಗೆ ಆರಂಭದ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನಕ್ಕೆ ಶಿಮ್ರಾನ್ ಹೆಟ್ಮಾಯೆರ್ 59 ರನ್ ( 36 ಬಾಲ್, 1 ಬೌಂಡರಿ, 6 ಸಿಕ್ಸರ್) ಹಾಗೂ ರವಿಚಂದ್ರನ್ ಅಶ್ವಿನ್(ರಿಟೈರ್ ಔಟ್) 28 ರನ್(23 ಬಾಲ್, 2 ಸಿಕ್ಸರ್) ಮೂಲಕ 5ನೇ ವಿಕೆಟ್ಗೆ 68 ರನ್ಗಳ ಅದ್ಭುತ ಜೊತೆಯಾಟವಾಡಿದರು. ರಿಯಾನ್ ಪರಾಗ್ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯವರೆಗೂ ನೆಲಕಚ್ಚಿ ಆಡಿದ ಹೆಟ್ಮಾಯೆರ್ ತಂಡದ ಮೊತ್ತವನ್ನ 160ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಲಕ್ನೋ ಪರ ಕೆ.ಗೌತಮ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.