ಕೊನೆಯ ಓವರ್ಗಳಲ್ಲಿ ಹೆಚ್ಚು ರನ್ ಕೈಚೆಲ್ಲುವ ಜೊತೆಗೆ ಬ್ಯಾಟಿಂಗ್ನಲ್ಲಿ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಧಾರದಿಂದಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋಲಿನ ದಂಡ ತೆತ್ತಬೇಕಾಯಿತು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ನಡುವಿನ ಹಣಾಹಣಿ ರೋಚಕತೆಯಿಂದ ಕೂಡಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್, ಶಿಮ್ರಾನ್ ಹೆಟ್ಮೆಯರ್(59*) ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 165/6 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್, 20 ಓವರ್ಗಳಲ್ಲಿ 162/8 ರನ್ಗಳಿಸಿತು. ಆ ಮೂಲಕ ಸಮಬಲದ ಹೋರಾಟದಲ್ಲಿ ಪ್ರಾಬಲ್ಯ ಮೆರೆದ ರಾಜಸ್ಥಾನ್, 3 ರನ್ಗಳ ರೋಚಕ ಗೆಲುವು ಸಾಧಿಸಿತು. ಅಲ್ಲದೇ ಈ ಗೆಲುವಿನೊಂದಿಗೆ ರಾಯಲ್ಸ್ ಪಡೆ ಪಾಯಿಂಟ್ಸ್ ಟೇಬಲ್ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.
ಕೈಕೊಟ್ಟ ಬ್ಯಾಟ್ಸ್ಮನ್ಗಳು:
ರಾಜಸ್ಥಾನ್ ನೀಡಿದ ಪೈಪೋಟಿಯ ಮೊತ್ತ ಎದುರಿಸಿದ ಲಕ್ನೋ ಸೂಪರ್ ಜೈಂಟ್ಸ್, ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಕೆ.ಎಲ್.ರಾಹುಲ್(0) ಹಾಗೂ ಕೆ.ಗೌತಮ್(0) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಬ್ಯಾಟಿಂಗ್ ಬಡ್ತಿ ಪಡೆದು 2ನೇ ಕ್ರಮಾಂಕದಲ್ಲಿ ಬಂದ ಜೇಸನ್ ಹೋಲ್ಡರ್(8), ಆಯುಷ್ ಬಡೋನಿ(5) ಬ್ಯಾಟಿಂಗ್ನಲ್ಲಿ ಕೈಕೊಟ್ಟರು. ಆದರೆ ಭರ್ಜರಿ ಫಾರ್ಮ್ನಲ್ಲಿರುವ ಕ್ವಿಂಟನ್ ಡಿಕಾಕ್(39) ಹಾಗೂ ದೀಪಕ್ ಹೂಡ(25) ಚೇತರಿಕೆ ನೀಡಿದರು.
ಸ್ಟಾಯ್ನಿಸ್ ವ್ಯರ್ಥ ಹೋರಾಟ:
ಪ್ರಮುಖ ಬ್ಯಾಟ್ಸ್ಮನ್ಗಳ ವೈಫ್ಯಲ್ಯ ಅನುಭವಿಸಿದ ಲಕ್ನೋ, ಸೋಲಿನ ಸುಳಿಗೆ ಸಿಲುಕಿತು. ಆದರೆ ಮಾರ್ಕಸ್ ಸ್ಟಾಯ್ನಿಸ್ 38* ರನ್(17 ಬಾಲ್, 2 ಬೌಂಡರಿ, 4 ಸಿಕ್ಸ್) ತಂಡದ ಗೆಲುವಿಗಾಗಿ ಕೊನೆಯವರೆಗೂ ಛಲಬಿಡದೆ ಹೋರಾಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಉಳಿದಂತೆ ಕೃನಾಲ್ ಪಾಂಡ್ಯ(22), ಚಮೀರ(13) ಬಿರುಸಿನ ಆಟವಾಡಿದರು ಪ್ರಯೋಜನವಾಗಲಿಲ್ಲ.
ಕೈಕೊಟ್ಟ ಲಕ್ನೋ ಲೆಕ್ಕಾಚಾರ:
ಇನ್ನಿಂಗ್ಸ್ನ ಮೊದಲ ಓವರ್ನ 2 ಬಾಲ್ಗಳಲ್ಲಿ 2 ವಿಕೆಟ್ ಕಳೆದುಕೊಂಡ ಲಕ್ನೋ ದೊಡ್ಡ ಆಘಾತ ಅನುಭವಿಸಿತು. ಈ ವೇಳೆ ಇನ್ ಫಾರ್ಮ್ ಆಟಗಾರ ದೀಪಕ್ ಹೂಡ ಬದಲು ಜೇಸನ್ ಹೋಲ್ಡರ್ ಅವರನ್ನ ಕಣಕ್ಕಿಳಿಸಿದ್ದು, ತಂಡಕ್ಕೆ ಫಲ ನೀಡಲಿಲ್ಲ. ಅಂತೆಯೇ ಮಧ್ಯಮ ಕ್ರಮಾಂಕದಲ್ಲಿ ಆಯುಷ್ ಬಡೋನಿ ಔಟಾದ ಬಳಿಕ, ಅನುಭವಿ ಆಟಗಾರ ಮಾರ್ಕಸ್ ಸ್ಟಾಯ್ನಿಸ್ ಬದಲಿಗೆ ಕೃನಾಲ್ ಪಾಂಡ್ಯ ಅವರನ್ನ ಆಡಿಸಿದ್ದು ಯಾವುದೇ ಪ್ರಯೋಜನವಾಗಲಿಲ್ಲ. 6ನೇ ಕ್ರಮಾಂಕದಲ್ಲಿ ಬಂದ ಸ್ಟಾಯ್ನಿಸ್, 17 ಬಾಲ್ಗಳಲ್ಲಿ 38* ರನ್ಗಳಿಸಿದರು. ಒಂದೊಮ್ಮೆ ಸ್ಟಾಯ್ನಿಸ್ಗೆ ಇನ್ನಷ್ಟು ಹೆಚ್ಚಿನ ಬಾಲ್ಗಳನ್ನು ಆಡುವ ಅವಕಾಶ ಸಿಕ್ಕಿದ್ದಿದ್ದರೆ ಪಂದ್ಯದ ಫಲಿತಾಂಶ ಬದಲಾಗುವ ಸಾಧ್ಯತೆ ಹೆಚ್ಚಾಗಿತ್ತು.
ಚಹಲ್ ಬೌಲಿಂಗ್ ಕಮಾಲ್:
ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಸ್ಪಿನ್ ಮೋಡಿ ಮಾಡುತ್ತಿರುವ ಯುಜು಼ವೇಂದ್ರ ಚಹಲ್ (4/41) ಲಕ್ನೋ ವಿರುದ್ಧವೂ ಚಾಣಾಕ್ಷ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಿದ ಚಹಲ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಟ್ರೆಂಟ್ ಬೋಲ್ಟ್ (2/30), ಪ್ರಸಿದ್ಧ ಕೃಷ್ಣ ಹಾಗೂ ಕುಲ್ದೀಪ್ ಸೇನ್ 1 ವಿಕೆಟ್ ಪಡೆದು ಮಿಂಚಿದರು. ಚೊಚ್ಚಲ ಪಂದ್ಯದಲ್ಲೇ ಒತ್ತಡದ ಪರಿಸ್ಥಿತಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ ಕುಲ್ದೀಪ್ ಸೇನ್ ಎಲ್ಲರ ಗಮನ ಸೆಳೆದರು.
ತಂಡಕ್ಕೆ ಹೆಟ್ಮಾಯೆರ್ ಆಸರೆ:
ಕೇವಲ 67 ರನ್ಗಳಿಗೆ ಆರಂಭದ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನಕ್ಕೆ ಶಿಮ್ರಾನ್ ಹೆಟ್ಮಾಯೆರ್ 59 ರನ್ ( 36 ಬಾಲ್, 1 ಬೌಂಡರಿ, 6 ಸಿಕ್ಸರ್) ಆಸರೆಯಾದರು. ಬಿರುಸಿನ ಆಟವಾಡಿದ ವೆಸ್ಟ್ ಇಂಡೀಸ್ ಆಟಗಾರ, ಆರ್. ಅಶ್ವಿನ್ 28 ರನ್(23 ಬಾಲ್, 2 ಸಿಕ್ಸರ್) ಜೊತೆಗೂಡಿ 5ನೇ ವಿಕೆಟ್ಗೆ 68 ರನ್ಗಳ ಅದ್ಭುತ ಜೊತೆಯಾಟವಾಡಿದರು. ಕೊನೆಯವರೆಗೂ ನೆಲಕಚ್ಚಿ ಆಡಿದ ಹೆಟ್ಮಾಯೆರ್ ತಂಡದ ಮೊತ್ತವನ್ನ 160ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಜಾಸ್ ಬಟ್ಲರ್(18), ನಾಯಕ ಸಂಜೂ ಸ್ಯಾಮ್ಸನ್(13) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ವ್ಯಾನ್ ದರ್ ದುಸೇನ್(3), ದೇವದತ್ ಪಡಿಕ್ಕಲ್(29) ಹಾಗೂ ರಿಯಾನ್ ಪರಾಗ್ 8 ರನ್ಗಳಿಸಿದರು. ಲಕ್ನೋ ಪರ ಕೆ.ಗೌತಮ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರೆ, ಅವೇಶ್ ಖಾನ್ 1 ವಿಕೆಟ್ ಪಡೆದರು.