ಬೌಂಡರಿ, ಸಿಕ್ಸರ್ಗಳ ಮೂಲಕ ರನ್ ಹೊಳೆಯನ್ನೇ ಹರಿಸಿದ ರಾಜಸ್ಥಾನ್ ರಾಯಲ್ಸ್, ನಾಯಕ ಸಂಜೂ ಸ್ಯಾಮ್ಸನ್(55) ಸ್ಪೋಟಕ ಅರ್ಧಶತಕ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ (41) ಬಿಂದಾಸ್ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ 211 ರನ್ಗಳ ಕಠಿಣ ಟಾರ್ಗೆಟ್ ನೀಡಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 210/6 ರನ್ಗಳಿಸಿತು. ತಂಡದ ಆರಂಭಿಕ ಬ್ಯಾಟ್ಸಮನ್ಗಳ ಅದ್ಭುತ ಆಟದ ನೆರವಿನೊಂದಿಗೆ ಕೊನೆ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಿಮ್ರಾನ್ ಹೆಟ್ಮಾಯೆರ್ ಕೇವಲ 13 ಬಾಲ್ಗಳಲ್ಲಿ 3 ಸಿಕ್ಸರ್. 2 ಬೌಂಡರಿ ನೆರವಿನಿಂದ 33 ರನ್ಗಳಿಸಿದರೆ. ರಿಯಾನ್ ಪರಾಗ್ 12 ತಂಡದ ಮೊತ್ತವನ್ನು 200 ರನ್ಗಳ ಗಡಿದಾಟಿಸಿದರು.
ಓಪನಿಂಗ್ ಬ್ಯಾಟ್ಸ್ಮನ್ಗಳಿಂದ ದೊರೆತ ಉತ್ತಮ ಆರಂಭದ ಸಂಪೂರ್ಣ ಲಾಭ ಪಡೆದ ಸಂಜೂ ಸ್ಯಾಮ್ಸನ್(55) ಹಾಗೂ ದೇವದತ್ ಪಡಿಕ್ಕಲ್(41) ರನ್ಗಳಿಸಿ ತಂಡಕ್ಕೆ ನೆರವಾದರು. ಬೌಂಡರಿ ಹಾಗೂ ಹಾಗೂ ಸಿಕ್ಸರ್ಗಳ ಮೂಲಕ ರನ್ಗಳಿಕೆಯ ವೇಗ ಹೆಚ್ಚಿಸಿದ ಈ ಜೋಡಿ, 3ನೇ ವಿಕೆಟ್ಗೆ 73 ರನ್ಗಳ ಅತ್ಯುತ್ತಮ ಜೊತೆಯಾಟವಾಡಿದರು. ತಮ್ಮ ಐಪಿಎಲ್ನ 100ನೇ ಪಂದ್ಯದಲ್ಲಿ ಮಿಂಚಿದ ಸಂಜೂ ಸ್ಯಾಮ್ಸನ್, ಅರ್ಧಶತಕ ಸಿಡಿಸಿ ಮಿಂಚಿದರೆ. ದೇವದತ್ ಪಡಿಕ್ಕಲ್ 41 ರನ್ಗಳ ಉಪಯುಕ್ತ ರನ್ಗಳಿಸಿದರು.
ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಜಾಸ್ ಬಟ್ಲರ್(35) ಹಾಗೂ ಯಶಸ್ವಿ ಜೈಸ್ವಾಲ್(20) ಉತ್ತಮ ಆರಂಭ ಒದಗಿಸಿದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಪ್ರಾಬಲ್ಯ ಸಾಧಿಸಿದ ಈ ಜೋಡಿ ಮೊದಲ ವಿಕೆಟ್ಗೆ 58 ರನ್ ಕಲೆಹಾಕಿದರು. ಸನ್ ರೈಸರ್ಸ್ ಪರ ರೊಮಾರಿಯೊ ಶೆಫರ್ಡ್ 2, ನಟರಾಜನ್ 2, ಭುವನೇಶ್ವರ್ ಕುಮಾರ್ ಹಾಗೂ ಉಮ್ರನ್ ಮಲ್ಲಿಕ್ ತಲಾ 1 ವಿಕೆಟ್ ಪಡೆದರು.