ಯಜು಼ವೇಂದ್ರ ಚಹಲ್(22/3) ಹಾಗೂ ಪ್ರಸಿದ್ಧ್ ಕೃಷ್ಣ(16/2) ಮಾರಕ ಬೌಲಿಂಗ್ ದಾಳಿ ಹಾಗೂ ಬ್ಯಾಟ್ಸ್ಮನ್ಗಳ ಅಬ್ಬರದ ಪ್ರದರ್ಶನದಿಂದ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ 61 ರನ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ನಲ್ಲಿ ಗೆಲುವಿನ ಅಭಿಯಾನ ಆರಂಭಿಸಿತು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 6 ವಿಕೆಟ್ಗೆ 210 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಸವಾಲು ಬೆನ್ನತ್ತಿದ ಸನ್ರೈಸರ್ಸ್ ಹೈದ್ರಾಬಾದ್ 20 ಓವರ್ಗಳಲ್ಲಿ 7 ವಿಕೆಟ್ಗೆ 149 ರನ್ ಕಲೆಹಾಕುವ ಮೂಲಕ 61 ರನ್ಗಳ ಸೋಲು ಕಂಡಿತು. ಪ್ರಮುಖ ಬ್ಯಾಟ್ಸಮನ್ಗಳ ವೈಫಲ್ಯದ ನಡುವೆಯೂ ಹೈದ್ರಾಬಾದ್ ಪರ ಐಡೆನ್ ಮಾಕ್ರಂ 57*(41) ಅರ್ಧಶತಕ ಬಾರಿಸಿದರೆ. ವಾಷಿಂಗ್ಟನ್ ಸುಂದರ್ 40(14) ಹಾಗೂ ರೊಮಾರಿಯೋ ಶೆಫರ್ಡ್ 24 ಕೊನೆವರೆಗೂ ಹೋರಾಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಚಹಲ್-ಪ್ರಸಿದ್ಧ್ ಮಾರಕ ದಾಳಿ
ರಾಜಸ್ಥಾನ್ ರಾಯಲ್ಸ್ ತಂಡದ ಕಠಿಣ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದ್ರಾಬಾದ್ ಬ್ಯಾಟಿಂಗ್ನಲ್ಲಿ ತತ್ತರಿಸಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ಕೇನ್ ವಿಲಿಯಂಸನ್(2), ಅಭಿಷೇಕ್ ಶರ್ಮ(9) ಬಹುಬೇಗನೆ ವಿಕೆಟ್ ಒಪ್ಪಿಸಿದರೆ. ನಂತರ ಬಂದ ರಾಹುಲ್ ತ್ರಿಪಾಠಿ(0) ಹಾಗೂ ನಿಕೋಲಸ್ ಪೂರನ್(0) ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಯಜು಼ವೇಂದ್ರ ಚಹಲ್ 4 ಓವರ್ಗಳಲ್ಲಿ 22 ರನ್ಗೆ 3 ವಿಕೆಟ್ ಪಡೆದು ಮಿಂಚಿದರೆ. ಇವರಿಗೆ ಸಾಥ್ ನೀಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ಓವರ್ನಲ್ಲಿ 16 ರನ್ಗೆ 2 ವಿಕೆಟ್ ಪಡೆದರೆ, ಟ್ರೆಂಟ್ ಬೋಲ್ಟ್ 23/2 ವಿಕೆಟ್ ಪಡೆದರು.
ರಾಜಸ್ಥಾನ್ ಬೃಹತ್ ಮೊತ್ತ:
ಇದಕ್ಕೂ ಮುನ್ನಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ ಅದ್ಭುತ್ ಬ್ಯಾಟಿಂಗ್ ಪ್ರದರ್ಶಿಸಿದರು. ಐಪಿಎಲ್ನಲ್ಲಿ ತಮ್ಮ 100ನೇ ಪಂದ್ಯವಾಡಿದ ಸಂಜೂ ಸ್ಯಾಮ್ಸನ್ 55 ರನ್ (27 ಎಸೆತ, 5 ಸಿಕ್ಸರ್, 3 ಬೌಂಡರಿ) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ದೇವದತ್ ಪಡಿಕ್ಕಲ್ 41 ರನ್ (29 ಎಸೆತ, 2 ಸಿಕ್ಸರ್, 4 ಬೌಂಡರಿ) ಬ್ಯಾಟಿಂಗ್ನಲ್ಲಿ ಮಿಂಚಿದರು. ಇನ್ನಿಂಗ್ಸ್ ಕೊನೆಯಲ್ಲಿ ಬಂದ ಶಿಮ್ರಾನ್ ಹೆಟ್ಮಾಯೆರ್ 32 ರನ್ (13 ಎಸೆತ, 3 ಸಿಕ್ಸರ್, 2 ಬೌಂಡರಿ) ಸ್ಪೋಟಕ ಆಟವಾಡಿದರು. ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಜಾಸ್ ಬಟ್ಲರ್ 35 (28 ಎಸೆತ, 3 ಸಿಕ್ಸರ್, 3 ಬೌಂಡರಿ) ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸನ್ರೈಸರ್ಸ್ ಪರ ಉಮ್ರಾನ್ ಮಲ್ಲಿಕ್ ಹಾಗೂ ನಟರಾಜನ್ ತಲಾ 2 ವಿಕೆಟ್ ಪಡೆದರು.
ಉಭಯ ತಂಡಗಳ ಮುಂದಿನ ಪಂದ್ಯ:
15ನೇ ಆವೃತ್ತಿಯಲ್ಲಿ ಗೆಲುವಿನ ಆರಂಭ ಕಂಡಿರುವ ರಾಜಸ್ಥಾನ್ ರಾಯಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿದರೆ. ಸನ್ರೈಸರ್ಸ್ ಹೈದ್ರಾಬಾದ್ ಏಪ್ರಿಲ್ 4ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಹಣಾಹಣಿ ನಡೆಸಲಿದೆ.