ಐಪಿಎಲ್ 2022ರ 47ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಟೂರ್ನಿಯ ಬಲಿಷ್ಠ ತಂಡವಾಗಿ ಮುನ್ನಡೆಯುತ್ತಿರುವ ರಾಯಲ್ಸ್ ಪಡೆ, ಜಯದ ನಿರೀಕ್ಷೆಯಲ್ಲಿದ್ದರೆ. ಸೋಲಿನ ಸುಳಿಗೆ ಸಿಲುಕಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸಹ ಕಮ್ ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದೆ.
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆಯುವ ಪಂದ್ಯಕ್ಕಾಗಿ ಎರಡು ತಂಡಗಳು ತಮ್ಮದೇ ತಯಾರಿ ಮಾಡಿಕೊಂಡಿವೆ. ಉಭಯ ತಂಡಗಳ ನಡುವಿನ ಇಂದಿನ ಪಂದ್ಯದಲ್ಲಿ ಹಲವು ಮೈಲುಗಲ್ಲುಗಳು ದಾಖಲಾಗುವ ನಿರೀಕ್ಷೆ ಇದೆ.
*T20ಯಲ್ಲಿ 1000 ಸಿಕ್ಸ್:*
ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕವೇ ಅಬ್ಬರಿಸಿರುವ ರಾಜಸ್ಥಾನ್ ರಾಯಲ್ಸ್ ಸಿಕ್ಸರ್ ಸಿಡಿಸುವುದರಲ್ಲಿ ತಮ್ಮದೇ ಛಾಪು ಮೂಡಿಸಿದೆ. ಇಂದಿನ ಪಂದ್ಯದಲ್ಲಿ 3 ಸಿಕ್ಸ್ ಬಾರಿಸಿದರೆ, ಟಿ20ಯಲ್ಲಿ 1000 ಸಿಕ್ಸ್ ಗಡಿದಾಟಲಿದೆ.
*200 ಬೌಂಡರಿ ಹೊಸ್ತಿಲಲ್ಲಿ*:
ಐಪಿಎಲ್ ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಸದ್ದು ಮಾಡಿರುವ ಸಂಜೂ ಸ್ಯಾಮ್ಸನ್, ಇಂದಿನ ಪಂದ್ಯದಲ್ಲಿ 1 ಬೌಂಡರಿ ಬಾರಿಸಿದರೆ ಐಪಿಎಲ್ ಟೂರ್ನಿಯಲ್ಲಿ 200 ಬೌಂಡರಿ ಗಡಿದಾಟಲಿದ್ದಾರೆ. ಅಲ್ಲದೇ 5 ಬೌಂಡರಿ ಬಾರಿಸಿದರೆ, ಟಿ20ಯಲ್ಲಿ 400 ಬೌಂಡರಿ ಬಾರಿಸಿದ ಹೆಗ್ಗಳಿಕೆ ಪಡೆಯಲಿದ್ದಾರೆ.
*ಟಿ20ಯಲ್ಲಿ 150 ಕ್ಯಾಚ್*
ಆಸೀಸ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಆರನ್ ಫಿಂಚ್, ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ನಲ್ಲೂ ಗಮನ ಸೆಳೆದಿದ್ದಾರೆ. ಇಂದಿನ ಪಂದ್ಯದಲ್ಲಿ ಎರಡು ಕ್ಯಾಚ್ ಪಡೆದರೆ ಟಿ20 ಕ್ರಿಕೆಟ್ ನಲ್ಲಿ 150 ಕ್ಯಾಚ್ ಪಡೆದ ಸಾಧನೆ ಮಾಡಲಿದ್ದಾರೆ.
*100ನೇ ಬೌಂಡರಿ ನಿರೀಕ್ಷೆ*
ವೆಸ್ಟ್ ಇಂಡೀಸ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಶಿಮ್ರಾನ್ ಹೆಟ್ಮಾಯರ್, ಐಪಿಎಲ್ ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಇಂದಿನ ಪಂದ್ಯದಲ್ಲಿ 4 ಬೌಂಡರಿ ಬಾರಿಸಿದರೆ, ಐಪಿಎಲ್ ನಲ್ಲಿ 100 ಬೌಂಡರಿ ಗಡಿದಾಟಲಿದ್ದಾರೆ.
*300 ಬೌಂಡರಿ ಸಾಧನೆ*
ಐಪಿಎಲ್ ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಘರ್ಜಿಸಿರುವ ಆಂಡ್ರೆ ರಸೆಲ್, ಇನ್ನು ನಾಲ್ಕು ಬೌಂಡರಿ ಬಾರಿಸಿದರೆ ಐಪಿಎಲ್ ಹಣಾಹಣಿಯಲ್ಲಿ 300 ಬೌಂಡರಿ ಬಾರಿಸಿದ ಹೆಗ್ಗಳಿಕೆ ಪಡೆಯಲಿದ್ದಾರೆ.
*ಟಿ20ಯಲ್ಲಿ 400 ಬೌಂಡರಿ*
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಪ್ರಸಕ್ತ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ 6 ಬೌಂಡರಿ ಬಾರಿಸಿದರೆ, ಟಿ20ಯಲ್ಲಿ 400 ಬೌಂಡರಿ ಗಡಿದಾಟಲಿದ್ದಾರೆ.
*5500 ರನ್ ಹೊಸ್ತಿಲಲ್ಲಿ*
ಕೆಕೆಆರ್ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿರುವ ಅಜಿಂಕ್ಯಾ ರಹಾನೆ, ಟಿ20ಯಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದಿನ ಪಂದ್ಯದಲ್ಲಿ 25 ರನ್ ಗಳಿಸಿದರೆ, ಟಿ20ಯಲ್ಲಿ 5500 ರನ್ ಗಡಿದಾಟಲಿದ್ದಾರೆ.