ಐಪಿಎಲ್ ಅಖಾಡದಲ್ಲಿ ವೀಕೆಂಡ್ ಮೋಜು ಮುಗಿದಿದೆ. ರೋಚಕ ಪಂದ್ಯಗಳು ವಾರದ ಪಂದ್ಯಗಳಿಗೂ ಹೆಚ್ಚು ಮಹತ್ವ ತಂದಿವೆ. ಟೂರ್ನಿಯಲ್ಲಿ ಅಜೇಯ ತಂಡವಾಗಿ ಮುನ್ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ಈಗ ಮತ್ತೊಂದು ಚಾಲೆಂಜ್ ಎದುರಿಸುತ್ತಿದೆ. ಸತತ 2 ಸೋಲಿನ ಬಳಿಕ ಸಿಎಸ್ಕೆ ವಿರುದ್ಧ ಗೆದ್ದಿರುವ ಸನ್ ರೈಸರ್ಸ್ ಹೈದ್ರಾಬಾದ್ ಗುಜರಾತ್ನ ಅಜೇಯ ಓಟಕ್ಕೆ ಬ್ರೇಕ್ ಹಾಕುವ ಯೋಚನೆಯಲ್ಲಿದೆ.
ಗುಜರಾತ್ ಲಯನ್ಸ್:
ಟ್ರಂಪ್ಕಾರ್ಡ್ ಸ್ಪಿನ್ನರ್ ರಶೀದ್ ಖಾನ್ ಈ ಹಿಂದೆ ಹೈದ್ರಾಬಾದ್ ತಂಡದಲ್ಲಿದ್ದರು. ಈಗ ತನ್ನ ಹಳೆಯ ತಂಡದ ವಿರುದ್ಧವೇ ಕಣಕ್ಕಿಳಿಯುತ್ತಿದ್ದಾರೆ. ಗುಜರಾತ್ ತಂಡಕ್ಕೆ ಹೆಚ್ಚಿನ ಸಮಸ್ಯೆ ಕಾಣುತ್ತಿಲ್ಲ. ಶುಭ್ಮನ್ ಗಿಲ್ ಫಾರ್ಮ್ ಅದ್ಭುತವಾಗಿ ಕಾಣುತ್ತಿದೆ. ಮ್ಯಾಥ್ಯೂವೇಡ್ ಸ್ಥಾನವೇ ಕೊಂಚ ಅಲ್ಲಾಡುತ್ತಿದ್ದರೂ ವಿಕೆಟ್ ಕೀಪರ್ ಅಗತ್ಯ. ಸಾಯಿ ಸುದರ್ಶನ್ ವಿಜಯ್ ಶಂಕರ್ ಸ್ಥಾನವನ್ನು ಕೈವಶ ಮಾಡಿಕೊಂಡಂತಿದೆ. ನಾಯಕ ಹಾರ್ದಿಕ್ ಪಾಂಡ್ಯಾ ನಂಬರ್ 4ರಲ್ಲಿ ಉತ್ತಮ ಆಟ ಆಡುತ್ತಿದ್ದಾರೆ. ಡೇವಿಡ್ ವಿಲ್ಲರ್ 2ನೇ ವಿದೇಶಿ ಆಟಗಾರನಾದರೆ, ಅಭಿನವ್ ಮನೋಹರ್ ಮತ್ತು ರಾಹುಲ್ ತೆವಾಟಿಯಾ ಫಿನಿಷಿಂಗ್ ಶಕ್ತಿ ತಂಡಕ್ಕಿದೆ. ರಶೀದ್ ಖಾನ್ ವಿದೇಶಿ ಖೋಟಾದ 3ನೇ ಆಟಗಾರನಾದರೂ ಟ್ರಂಪ್ ಕಾರ್ಡ್ ಬೌಲರ್. ಮೊಹಮ್ಮದ್ ಶಮಿ, ದರ್ಶನ್ ನಾಲ್ಕಂಡೆ ಮತ್ತು ಲೊಕಿ ಫರ್ಗ್ಯೂಸನ್ ವೇಗದ ಬೌಲಿಂಗ್ ಕೋಟಾವನ್ನು ಭರ್ತಿ ಮಾಡಲಿದ್ದಾರೆ.
ಲಯನ್ಸ್ ತಂಡಕ್ಕೆ ಬ್ಯಾಟಿಂಗ್ ಆಗಲಿ, ಬೌಲಿಂಗ್ ಆಗಲಿ ಸಮಸ್ಯೆ ಕಾಣುತ್ತಿಲ್ಲ. ಶಮಿ, ದರ್ಶನ್ ಮತ್ತು ಫರ್ಗ್ಯೂಸನ್ ವೇಗಕ್ಕೆ ಸಾಥ್ ನೀಡಲು ಹಾರ್ದಿಕ್ ಪಾಂಡ್ಯಾ ಇದ್ದಾರೆ. ರಶೀದ್ ಖಾನ್ ಸ್ಪಿನ್ ಬೌಲಿಂಗ್ಗೆ ಸಹಾಯ ಬೇಕು ಅಂದರೆ ರಾಹುಲ್ ತವಾಟಿಯಾ ಇದ್ದಾರೆ. ಸಾಯಿ ಸುದರ್ಶನ್ ಮತ್ತು ಅಭಿನವ್ ಮನೋಹರ್ ಕೂಡ ಚೆಂಡು ತಿರುಗಿಸಬಲ್ಲರು.
ಸನ್ ರೈಸರ್ಸ್ ಹೈದ್ರಾಬಾದ್:
ಸನ್ ರೈಸರ್ಸ್ ಬ್ಯಾಟಿಂಗ್ಗಿಂತ ಬೌಲಿಂಗ್ನಲ್ಲಿ ಹೆಚ್ಚು ಬಲವಾಗಿದೆ. ಬ್ಯಾಟಿಂಗ್ನಲ್ಲಿ ಕೇನ್ ವಿಲಿಯಮ್ಸನ್ ಇಲ್ಲಿ ತನಕ ಮಿಂಚಿಲ್ಲ. ಅಭಿಷೇಕ್ ಶರ್ಮಾ ಸಿಎಸ್ಕೆ ವಿರುದ್ಧ ಸೂಪರ್ ಆಟ ಆಡಿದ್ದಾರೆ. ಆಲ್ರೌಂಡರ್ ಮಾರ್ಕೋ ಜೆನ್ಸನ್, ಏಡಿಯನ್ ಮಾರ್ಕ್ ರಾಂ ಮತ್ತು ನಿಕೊಲಸ್ ಪೂರನ್ ವಿದೇಶಿ ಕೋಟಾವನ್ನು ಭರ್ತಿ ಮಾಡುತ್ತಾರೆ. ರಾಹುಲ್ ತ್ರಿಪಾಠಿ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಪೆಷಲಿಸ್ಟ್ ಜಾಗವನ್ನು ಭರ್ತಿ ಮಾಡುತ್ತಿದ್ದಾರೆ. ಭುವನೇಶ್ವರ್ ಕುಮಾರ್, ಟಿ ನಟರಾಜನ್ ಮತ್ತು ಉಮ್ರನ್ ಮಲಿಕ್ ತಂಡದ ವೇಗದ ಬೌಲರ್ಗಳು.
ಪಿಚ್ & ಕಂಡೀಷನ್:
ಡಿ. ವೈ. ಪಾಟೀಲ್ ಮೈದಾನ ದೊಡ್ಡ ಮೊತ್ತ ಗಳಿಸುವ ಪಿಚ್ ಆಗಿದೆ. ಆದರೆ ಆರಂಭದಲ್ಲಿ ವೇಗದ ಬೌಲರ್ಗಳಿಗೆ ಸಿಗುವ ನೆರವು ಮತ್ತು ಪಂದ್ಯದ ಕೊನೆಯ ಹಂತದಲ್ಲಿ ಬೀಳುವ ಇಬ್ಬನಿ ಪಂದ್ಯದ ರೋಚಕತೆ ಹೆಚ್ಚಿಸುತ್ತದೆ. ಹೀಗಾಗಿ ಟಾಸ್ ಮೇಲೆ ತಂಡಗಳ ಕಣ್ಣಿದೆ.