ಆರಂಭಿಕ ಬ್ಯಾಟ್ಸ್ಮನ್ ಜಾಸ್ ಬಟ್ಲರ್(100) ಅಬ್ಬರದ ಶತಕ ಹಾಗೂ ಬೌಲರ್ಗಳ ಸಾಂಘಿಕ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 23 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 193 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಪ್ರಮುಖ ಆಟಗಾರರ ವೈಫಲ್ಯದಿಂದ 20 ಓವರ್ಗಳಲ್ಲಿ8 ವಿಕೆಟ್ ನಷ್ಟಕ್ಕೆ 170 ರನ್ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ ಮುಂಬೈ 15ನೇ ಆವೃತ್ತಿಯಲ್ಲಿ ಎರಡನೇ ಸೋಲಿನ ಆಘಾತ ಅನುಭವಿಸಿದರೆ. ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಗೆಲುವು ಕಂಡಿತು.
ಕಿಶನ್-ತಿಲಕ್ ವ್ಯರ್ಥ ಹೋರಾಟ:
ರಾಜಸ್ಥಾನ್ ನೀಡಿದ 194 ರನ್ಗಳ ಟಾರ್ಗೆಟ್ ಎದುರಿಸಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ನಾಯಕ ರೋಹಿತ್ ಶರ್ಮ(10) ಹಾಗೂ ಅನ್ಮೋಲ್ಪ್ರೀತ್ ಸಿಂಗ್(5) ಬಹುಬೇಗನೆ ನಿರ್ಗಮಿಸಿದರು. ನಂತರ ಜೊತೆಯಾದ ಇಶಾನ್ ಕಿಶನ್(54) ಹಾಗೂ ತಿಲಕ್ ವರ್ಮ(61) ಅದ್ಭುತ ಆಟವಾಡಿದರು. ತಂಡಕ್ಕೆ ಎದುರಾದ ಆರಂಭಿಕ ಆಘಾತದ ನಡುವೆಯೂ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ, 3ನೇ ವಿಕೆಟ್ಗೆ 81 ರನ್ಗಳ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಆದರೆ ಇವರಿಬ್ಬರ ನಂತರ ಬಂದ ಯಾವುದೇ ಬ್ಯಾಟರ್ಗಳು ನಿರೀಕ್ಷಿತ ಆಟವಾಡಲಿಲ್ಲ. ತಂಡದ ಸ್ಟಾರ್ ಆಲ್ರೌಂಡರ್ ಕೈರನ್ ಪೊಲಾರ್ಡ್(22) ಸುಲಭವಾಗಿ ರನ್ಗಳಿಸಲು ಸಾಧ್ಯವಾಗದೆ ತಿಣುಕಾಡಿದರು. ಟಿಮ್ ಡೇವಿಡ್(1), ಡೆನಿಯಲ್ ಸ್ಯಾಮ್ಸ್(0) ಯಾವುದೇ ಕಮಾಲ್ ಮಾಡಲಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಯಜು಼ವೇಂದ್ರ ಚಹಲ್(2/24), ನವದೀಪ್ ಸೈನಿ(2/36) ಉತ್ತಮ ದಾಳಿ ನಡೆಸಿದರೆ. ಟ್ರೆಂಟ್ ಬೋಲ್ಟ್, ಆರ್. ಅಶ್ವಿನ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
ಬಟ್ಲರ್ ಬೊಂಬಾಟ್ ಶತಕ:
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಜಾಸ್ ಬಟ್ಲರ್ 100 ರನ್(68 ಎಸೆತ, 11 ಬೌಂಡರಿ, 5 ಸಿಕ್ಸ್) ಸಿಡಿಸಿ ಅಬ್ಬರಿಸಿದರು. ಮುಂಬೈ ಬೌಲಿಂಗ್ ದಾಳಿಯನ್ನು ಧೂಳಿಪಟಗೊಳಿಸಿ ಬಟ್ಲರ್, ಐಪಿಎಲ್ನಲ್ಲಿ ತಮ್ಮ 2ನೇ ಹಾಗೂ ಪ್ರಸಕ್ತ ಐಪಿಎಲ್ನ ಮೊದಲ ಶತಕ ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶಿಮ್ರಾನ್ ಹೆಟ್ಮಾಯೆರ್ 35 ರನ್(14 ಎಸೆತ, 3 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರೆ. ನಾಯಕ ಸಂಜೂ ಸ್ಯಾಮ್ಸನ್ 30 ರನ್ (21 ಎಸೆತ, 1 ಬೌಂಡರಿ, 3 ಸಿಕ್ಸರ್) ರನ್ಗಳಿಸಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರ, ಥೈಮಲ್ ಮಿಲ್ಸ್ ತಲಾ 3 ಹಾಗೂ ಕೈರನ್ ಪೊಲಾರ್ಡ್ 1 ವಿಕೆಟ್ ಪಡೆದರು.
ಎರಡು ತಂಡದ ಮುಂದಿನ ಪಂದ್ಯ:
ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್, ಏಪ್ರಿಲ್ 6ರಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಿದರೆ. ಸತತ ಎರಡು ಗೆಲುವು ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ಏಪ್ರಿಲ್ 5ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಹಣಾಹಣಿ ನಡೆಸಲಿದೆ.