2022ರಲ್ಲಿ ಅದ್ಭುತ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಬಾಬರ್ ಆಜ಼ಂ, ಮತ್ತೊಂದು ಶ್ರೇಷ್ಠ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಪಾಕಿಸ್ತಾನ ತಂಡದ ನಾಯಕ ತಮ್ಮ ತಂಡಕ್ಕೆ ಏಕದಿನ ಸರಣಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಲಾಹೋರ್ನಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಬಾಬರ್ ಆಜ಼ಂ (ಅಜೇಯ 105) ರನ್ಗಳನ್ನ ಬಾರಿಸಿ ತಮ್ಮ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು. ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, 210 ರನ್ಗಳಿಗೆ ಸರ್ವಪತನ ಕಂಡಿತು. ಈ ಸುಲಭದ ಸವಾಲು ಎದುರಿಸಿದ ಪಾಕಿಸ್ತಾನ 37.5 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 214 ರನ್ಗಳಿಸಿ, 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಆಸ್ಟ್ರೇಲಿಯಾ ನೀಡಿದ ಸಾಧಾರಣ ಗುರಿ ಎದುರಿಸಿದ ಪಾಕಿಸ್ತಾನ ಆರಂಭದಲ್ಲೇ ಫಖರ್ ಜ಼ಮಾನ್(17) ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಇಮಾಮ್-ಉಲ್-ಹಕ್(89*) ಹಾಗೂ ಬಾಬರ್ ಆಜ಼ಂ(105*) ಮತ್ತೊಮ್ಮೆ ಕಮಾಲ್ ಮಾಡಿತು. ಆಸೀಸ್ ಬೌಲಿಂಗ್ ದಾಳಿಗೆ ತಿರುಗೇಟು ನೀಡಿದ ಈ ಇಬ್ಬರು ಆಟಗಾರರು, 2ನೇ ವಿಕೆಟ್ಗೆ ಮುರಿಯದ 190 ರನ್ಗಳ ಜೊತೆಯಾಟವಾಡಿದರು. ಮತ್ತೊಂದು ಯಶಸ್ವಿ ಪ್ರದರ್ಶನ ನೀಡಿದ ಬಾಬರ್ ಆಜ಼ಂ, ಏಕದಿನ ಕ್ರಿಕೆಟ್ನಲ್ಲಿ 16ನೇ ಶತಕ ಸಿಡಿಸಿ ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ಇಮಾಮ್ ಸಹ ಮತ್ತೊಂದು ಅತ್ಯುತ್ತಮ ಪ್ರದರ್ಶನ ನೀಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್(0) ಹಾಗೂ ಆರನ್ ಫಿಂಚ್(0) ಖಾತೆ ತೆರೆಯುವ ಮೊದಲೇ ಪೆವಿಲಿಯನ್ ಸೇರಿದರು. ನಂತರ ಬಂದ ಬೆನ್ ಡೆರ್ಮೊಟ್(36) ರನ್ಗಳ ಉಪಯುಕ್ತ ಕಾಣಿಕೆ ನೀಡಿದರೆ. ಮಾರ್ನಸ್ ಲಬುಸ್ಚೆಗ್ನೆ(4), ಸ್ಟಾಯ್ನಿಸ್(19) ಸಹ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಅಲೆಕ್ಸ್ ಕ್ಯಾರಿ(56) ಹಾಗೂ ಸೆನ್ ಅಬೋಟ್(49), ಕೆಮರೂನ್ ಗ್ರೀನ್(34) ಜವಾಬ್ದಾರಿಯ ಆಟದಿಂದ ತಂಡಕ್ಕೆ ನೆರವಾದರು.
ಪಾಕ್ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಹ್ಯಾರಿಸ್ ರಾಫ್(3/39), ಮೊಹಮ್ಮದ್ ವಾಸಿಂ(3/40), ಶಹೀನ್ ಅಫ್ರೀದಿ(2/40) ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಉಳಿದಂತೆ ಜಹೀದ್ ಮಹಮೂದ್ ಹಾಗೂ ಇಫ್ತಿಕಾರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.