ದೀಪಕ್ ಹೂಡ(59) ಏಕಾಂಗಿ ಹೋರಾಟದ ನಡುವೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 24 ರನ್‌ಗಳಿಂದ ಮಣಿಸಿದ ರಾಜಸ್ಥಾನ್ ರಾಯಲ್ಸ್, ಪ್ಲೇ-ಆಫ್ ರೇಸ್‌ನಲ್ಲಿ ಮತ್ತೊಂದು ಮೆಟ್ಟಿಲೇರಿತು.

ಬ್ರಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪರಿಣಾಮ 20 ಓವರ್‌ಗಳಲ್ಲಿ 178/6 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್, ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 154/8 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 24 ರನ್‌ಗಳ ಸೋಲೊಪ್ಪಿಕೊಂಡಿತು.

ಜೈಸ್ವಾಲ್-ಪಡಿಕ್ಕಲ್ ಆಸರೆ:
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನ್ನಿಂಗ್ಸ್ ಆರಂಭಿಸಿದ ಜಾಸ್ ಬಟ್ಲರ್(2) ಬಹುಬೇಗನೆ ವಿಕೆಟ್ ಒಪ್ಪಿಸಿದರು. ನಂತರ ಜೊತೆಯಾದ ಯಶಸ್ವಿ ಜೈಸ್ವಾಲ್(41) ಹಾಗೂ ನಾಯಕ ಸಂಜೂ ಸ್ಯಾಮ್ಸನ್(32) ಜವಾಬ್ದಾರಿಯ ಆಟವಾಡಿದರು. 2ನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಬಳಿಕ ಬಂದ ದೇವದತ್ ಪಡಿಕ್ಕಲ್(39) ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್(19), ನೀಶಮ್(14), ಅಶ್ವಿನ್(10*) ಹಾಗೂ ಬೋಲ್ಟ್(17*) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 6 ವಿಕೆಟ್‌ಗೆ 178 ರನ್ ಕಲೆಹಾಕಿತು. ಲಕ್ನೋ ಪರ ಬಿಷ್ಣೋಯಿ 2, ಅವೇಶ್, ಹೋಲ್ಡರ್ ಹಾಗೂ ಬಡೋನಿ ತಲಾ 1 ವಿಕೆಟ್ ಪಡೆದುಕೊಂಡರು.

ಲಕ್ನೋ ಬ್ಯಾಟಿಂಗ್ ವೈಫಲ್ಯ:
ರಾಜಸ್ಥಾನ್ ರಾಯಲ್ಸ್ ನೀಡಿದ 179 ರನ್‌ಗಳ ಸ್ಪರ್ಧಾತ್ಮಕ ಸವಾಲು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿಕಾಕ್(7) ಹಾಗೂ ಕೆ.ಎಲ್.ರಾಹುಲ್(10) ಬಹುಬೇಗನೆ ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ 1ನೇ ಕ್ರಮಾಂಕದಲ್ಲಿ ಬಂದ ಆಯುಷ್ ಬಡೋನಿ(0) ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಕಣಕ್ಕಿಳಿದ ದೀಪಕ್ ಹೂಡ(59) ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ(25), ಜೇಸನ್ ಹೋಲ್ಡರ್(1), ದುಶ್ಮಂತ ಚಮೀರ(0) ತಂಡಕ್ಕೆ ಆಸರೆ ಆಗಲಿಲ್ಲ. ಮಾರ್ಕಸ್ ಸ್ಟಾಯ್ನಿಸ್ (27) ಕೊನೆವರೆಗೂ ಹೋರಾಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪರಿಣಾಮ ಲಕ್ನೋ ಹೋರಾಟ 154 ರನ್‌ಗಳಿಗೆ ಅಂತ್ಯಗೊಂಡಿತು.

ರಾಜಸ್ಥಾನ್ ಸಾಂಘಿಕ ದಾಳಿ:
ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ರಾಜಸ್ಥಾನಕ್ಕೆ ಬೌಲರ್‌ಗಳು ಆಸರೆಯಾದರು. ಸಂಘಟಿತ ಬೌಲಿಂಗ್ ಪ್ರದರ್ಶಿಸಿದ ರಾಜಸ್ಥಾನ್ ಬೌಲರ್‌ಗಳು ಆರಂಭದಿಂದಲೇ ಲಕ್ನೋ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ರಾಯಲ್ಸ್ ಪರ ಬೋಲ್ಟ್, ಪ್ರಸಿದ್ಧ್ ಹಾಗೂ ಮೆಕಾಯ್ 2 ವಿಕೆಟ್ ಪಡೆದರೆ, ಚಹಲ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.

2ನೇ ಸ್ಥಾನಕ್ಕೇರಿದ ರಾಯಲ್ಸ್:
ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಸಂಘಟಿತ ಆಟವಾಡಿದ ರಾಜಸ್ಥಾನ್ ರಾಯಲ್ಸ್, 24 ರನ್‌ಗಳಿಂದ ಲಕ್ನೋ ವಿರುದ್ದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ರಾಜಸ್ಥಾನ್, 13 ಪಂದ್ಯಗಳಿಂದ 8 ಗೆಲುವಿನೊಂದಿಗೆ 16 ಅಂಕ ಪಡೆಯುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೇರಿದೆ.