ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಆರ್. ಅಶ್ವಿನ್(50) ಹಾಗೂ ದೇವದತ್ ಪಡಿಕ್ಕಲ್(48) ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 160 ರನ್‌ಗಳಿಸಿದೆ.
ಡಿ.ವೈ. ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್, 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 ರನ್‌ಗಳಿಸಿತು. ರಾಜಸ್ಥಾನ್ ಪರ ಆರ್. ಅಶ್ವಿನ್(50), ದೇವದತ್ ಪಡಿಕ್ಕಲ್(48) ಉಪಯುಕ್ತ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ ನೆರವಾದರು.

ಕೈಕೊಟ್ಟ ಆರಂಭಿಕ ಜೋಡಿ:
ರಾಜಸ್ಥಾನ್ ರಾಯಲ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಓಪನರ್‌ಗಳು ನಿರೀಕ್ಷಿತ ಆಟವಾಡುವಲ್ಲಿ ವಿಫಲವಾದರು. ಪ್ರಸಕ್ತ ಸೀಸನ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಜಾಸ್ ಬಟ್ಲರ್(7) ಇನ್ನಿಂಗ್ಸ್‌ನ 3ನೇ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದ ಯಶಸ್ವಿ ಜೈಸ್ವಾಲ್(19) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಅಶ್ವಿನ್ ಅರ್ಧಶತಕದ ಆಸರೆ:
ಮೊದಲ ಕ್ರಮಾಂಕದಲ್ಲಿ ಕಣಕ್ಕಿಳಿದ ಆರ್. ಅಶ್ವಿನ್ 50 ರನ್(38 ಬಾಲ್, 4 ಬೌಂಡರಿ, 2 ಸಿಕ್ಸ್) ಉತ್ತಮ ಆಟವಾಡಿದರು. ಓಪನರ್‌ಗಳ ವೈಫಲ್ಯದ ನಡುವೆ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರವಿಚಂದ್ರನ್ ಅಶ್ವಿನ್, ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಡೆಲ್ಲಿ ಕ್ಯಾಪಿಟಿಲ್ಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಅಶ್ವಿನ್, ಐಪಿಎಲ್‌ನ ಚೊಚ್ಚಲ ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. ಅಲ್ಲದೇ ಆರ್.ಅಶ್ವಿನ್ ಹಾಗೂ ದೇವದತ್ ಪಡಿಕ್ಕಲ್, 3ನೇ ವಿಕೆಟ್‌ಗೆ 53(36) ಉತ್ತಮ ಜೊತೆಯಾಟವಾಡಿದರು.
ಪಡಿಕ್ಕಲ್ ಜವಾಬ್ದಾರಿ ಆಟ:
ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ನಂತರ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ 48 ರನ್(30 ಬಾಲ್, 6 ಬೌಂಡರಿ, 2 ಸಿಕ್ಸ್) ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆ ಹಂತದವರೆಗೂ ನೆಲಕಚ್ಚಿನಿಂತು ಆಟಡಿ ಪಡಿಕ್ಕಲ್, ಅರ್ಧಶತಕದಿಂದ ವಂಚಿತರಾಗಿ ಹೊರನಡೆದರು. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಸಂಜೂ ಸ್ಯಾಮ್ಸನ್(6) ಮತ್ತು ರಿಯಾನ್ ಪರಾಗ್(9) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹೆಟ್ಮಾಯೆರ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ವ್ಯಾನ್ ದರ್ ದುಸೇನ್(12*) ಹಾಗೂ ಬೋಲ್ಟ್ (3*) ರನ್‌ಗಳಿಸಿದರು.

ಡೆಲ್ಲಿ ಸಂಘಟಿತ ಬೌಲಿಂಗ್:
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡುವ ಮೂಲಕ ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಡೆಲ್ಲಿ ಪರ ಚೇತನ್ ಸಕಾರಿಯಾ(2/23), ಅನ್ರಿಕ್ ನೋಕಿಯಾ(2/39) ಹಾಗೂ ಮಿಚೆಲ್ ಮಾರ್ಷ್(2/25) ಉತ್ತಮ ಪ್ರದರ್ಶನ ನೀಡಿದರು.