ಮಿಚೆಲ್ ಮಾರ್ಷ್(89) ಮತ್ತು (2/25) ಆಲ್ರೌಂಡ್ ಪ್ರದರ್ಶನ ಹಾಗೂ ಡೇವಿಡ್ ವಾರ್ನರ್(52*) ಜವಾಬ್ದಾರಿಯ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 ರನ್‌ಗಳಿಸಿತು. ಈ ಸವಾಲು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 18.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್‌ಗಳಿಸಿ ಗೆಲುವಿನ ನಗೆಬೀರಿತು. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ-ಆಫ್ ಪ್ರವೇಶಿಸುವ ಕನಸು ಜೀವಂತವಾಗಿದೆ.
ಅಶ್ವಿನ್-ಪಡಿಕ್ಕಲ್ ಆಸರೆ:
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್(19) ಹಾಗೂ ಜಾಸ್ ಬಟ್ಲರ್(7) ತಂಡಕ್ಕೆ ಆಸರೆಯಾಗಲಿಲ್ಲ. ಈ ಹಂತದಲ್ಲಿ ಬ್ಯಾಟಿಂಗ್ ಬಡ್ತಿ ಪಡೆದು 1ನೇ ಕ್ರಮಾಂಕದಲ್ಲಿ ಬಂದ ಆರ್. ಅಶ್ವಿನ್ 50 ರನ್(38 ಬಾಲ್, 4 ಬೌಂಡರಿ, 2 ಸಿಕ್ಸ್) ಹಾಗೂ ದೇವದತ್ ಪಡಿಕ್ಕಲ್ 48 ರನ್(30 ಬಾಲ್, 6 ಬೌಂಡರಿ, 2 ಸಿಕ್ಸ್) ಉತ್ತಮ ಆಟವಾಡಿದರು. ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಆರ್. ಅಶ್ವಿನ್, ಐಪಿಎಲ್‌ನ ಚೊಚ್ಚಲ ಅರ್ಧಶತಕ ಬಾರಿಸಿದರೆ. ಪಡಿಕ್ಕಲ್ ಅರ್ಧಶತಕ ವಂಚಿತರಾಗಿ ಹೊರ ನಡೆದರು. ಆದರೆ ನಂತರ ಬಂದ ನಾಯಕ ಸಂಜೂ ಸ್ಯಾಮ್ಸನ್(6), ರಿಯಾನ್ ಪರಾಗ್(9) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ದುಸೇನ್(12*) ಮತ್ತು ಬೋಲ್ಟ್(3*) ತಂಡದ ಮೊತ್ತವನ್ನ 160ಕ್ಕೆ ಏರಿಸಿದರು.
ಡೆಲ್ಲಿ ಸಂಘಟಿತ ಬೌಲಿಂಗ್:
ಡೆಲ್ಲಿ ಕ್ಯಾಪಿಟಲ್ಸ್ ಪರ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡುವ ಮೂಲಕ ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಡೆಲ್ಲಿ ಪರ ಚೇತನ್ ಸಕಾರಿಯಾ(2/23), ಅನ್ರಿಕ್ ನೋಕಿಯಾ(2/39) ಹಾಗೂ ಮಿಚೆಲ್ ಮಾರ್ಷ್(2/25) ಉತ್ತಮ ಪ್ರದರ್ಶನ ನೀಡಿದರು.
ವಾರ್ನರ್-ಮಾರ್ಷ್ ಅಬ್ಬರ:
ರಾಜಸ್ಥಾನ್ ರಾಯಲ್ಸ್ ನೀಡಿದ 161 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, ಆರಂಭದಲ್ಲೇ ಶ್ರೀಕರ್ ಭರತ್(0) ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಡೇವಿಡ್ ವಾರ್ನರ್ 52* ರನ್(41 ಬಾಲ್, 5 ಬೌಂಡರಿ, 1 ಸಿಕ್ಸ್) ಹಾಗೂ ಮಿಚೆಲ್ ಮಾರ್ಷ್ 89 ರನ್(62 ಬಾಲ್, 5 ಬೌಂಡರಿ, 7 ಸಿಕ್ಸ್) ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ್ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದ ಈ ಜೋಡಿ 2ನೇ ವಿಕೆಟ್‌ಗೆ 143 ರನ್‌ಗಳ ಅದ್ಭುತ ಜೊತೆಯಾಟದಿಂದ ತಂಡದ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು. ಸ್ಪೋಟಕ ಆಟವಾಡಿದ ಮಾರ್ಷ್, 89 ರನ್‌ಗಳಿಸಿ ಔಟಾದರು. ನಂತರ ಬಂದ ರಿಷಭ್ ಪಂತ್(13*) ತಂಡವನ್ನ ಗೆಲುವಿನ ದಡಸೇರಿದರು. ರಾಜಸ್ಥಾನ್ ಪರ ಬೋಲ್ಟ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು.
ಡೆಲ್ಲಿ ಪ್ಲೇ-ಆಫ್ ರೇಸ್‌ನಲ್ಲಿ
ಗೆಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್, ಇದೀಗ ಪ್ಲೇ-ಆಫ್ ರೇಸ್‌ನಲ್ಲಿ ಮತ್ತೊಂದು ಮೆಟ್ಟಿಲೇರಿದೆ. 12 ಪಂದ್ಯಗಳಿಂದ 12 ಪಾಯಿಂಟ್ಸ್ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್, ಪಾಯಿಂಟ್ಸ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಇದರೊಂದಿಗೆ ಪ್ಲೇ-ಆಫ್ ರೇಸ್ ಇನ್ನಷ್ಟು ಕುತೂಹಲ ಮೂಡಿಸಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ರೇಸ್‌ನಲ್ಲಿವೆ.