ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಜವಾಬ್ದಾರಿಯುತ ಆಟವಾಡಿದ ರಜತ್ ಪತಿದಾರ್(58) ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 157 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್, 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್‌ಗಳಿಸಿತು. ಆರ್‌ಸಿಬಿ ಪರ ಪತಿದಾರ್(58), ಡುಪ್ಲೆಸ್ಸಿ(25) ತಂಡಕ್ಕೆ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಮತ್ತೆ ಮಿಂಚಿದ ಪತಿದಾರ್:
ಮೊದಲ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರೀಕ್ಷಿತ ಆರಂಭ ಪಡೆಯಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ(7) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ನಂತರ ಜೊತೆಯಾದ ನಾಯಕ ಫಾಫ್ ಡುಪ್ಲೆಸ್ಸಿ(25) ಹಾಗೂ ರಜತ್ ಪತಿದಾರ್(58) ಉತ್ತಮ ಆಟವಾಡಿದರು. ಅಲ್ಲದೇ 2ನೇ ವಿಕೆಟ್‌ಗೆ 70 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪತಿದಾರ್ 58 ರನ್(42 ಬಾಲ್, 4 ಬೌಂಡರಿ, 3 ಸಿಕ್ಸ್) ಅರ್ಧಶತಕ ಸಿಡಿಸಿ ಮತ್ತೊಮ್ಮೆ ಅಬ್ಬರಿಸಿದರು.
ನಂತರ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್(24) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ರಜತ್ ಪತಿದಾರ್ ವಿಕೆಟ್ ಪತನದ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿ ಆಡಲಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಬಂದ ಮಹಿಪಾಲ್ ಲೋಮ್ರೋರ್(8), ದಿನೇಶ್ ಕಾರ್ತಿಕ್(6), ಹನಿಂದು ಹಸರಂಗ(0), ಹರ್ಷಲ್ ಪಟೇಲ್(1) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಶಹಬಾಜ್ ಅಹ್ಮದ್(12*) ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟಿಸಿದರು.

ಪ್ರಸಿದ್ಧ್-ಮೆಕಾಯ್ ದಾಳಿ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್‌ಗೆ ಬೌಲರ್‌ಗಳು ಆಸರೆಯಾದರು. ಪ್ರಮುಖವಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ(3/22) ಹಾಗೂ ಒಬೆಡ್ ಮೆಕಾಯ್(3/23) ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ಉಳಿದಂತೆ ಟ್ರೆಂಟ್ ಬೋಲ್ಟ್(1/28) ಹಾಗೂ ಆರ್. ಅಶ್ವಿನ್(1/31) ಉತ್ತಮ ಬೌಲಿಂಗ್ ದಾಳಿ ನಡೆಸಿದರು.