ಜಾಸ್ ಬಟ್ಲರ್(106*) ಸ್ಪೋಟಕ ಶತಕದ ನೆರವಿನಿಂದ ಕ್ವಾಲಿಫೈಯರ್-2 ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್, 15ನೇ ಆವೃತ್ತಿಯ ಐಪಿಎಲ್ ಫೈನಲ್‌ಗೆ ʼರಾಯಲ್ʼ ಎಂಟ್ರಿಕೊಟ್ಟಿದೆ. ಆದರೆ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಕನಸು ಭಗ್ನಗೊಂಡಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 157 ರನ್ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳ ಭರ್ಜರಿ ಪ್ರದರ್ಶನದಿಂದ 18.1 ಓವರ್‌ಗಳಲ್ಲಿ 3 ವಿಕೆಟ್‌ಗೆ 161 ರನ್‌ಗಳಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ 2022ರ ಐಪಿಎಲ್ ಫೈನಲ್‌ಗೆ ಲಗ್ಗೆಯಿಟ್ಟರೆ, ಆರ್‌ಸಿಬಿ ಪಂದ್ಯಾವಳಿಯಿಂದ ಹೊರಬಿದ್ದಿತು.

ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ:
ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಕಂಡಿತು. ವಿರಾಟ್ ಕೊಹ್ಲಿ(7) ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ನಾಯಕ ಡುಪ್ಲೆಸ್ಸಿ(25) ರನ್‌ಗಳಿಸಿದರು. ಆದರೆ ರಜತ್ ಪತಿದಾರ್ 58 ರನ್(42 ಬಾಲ್, 4 ಬೌಂಡರಿ, 3 ಸಿಕ್ಸ್) ಅರ್ಧಶತಕ ಸಿಡಿಸಿ ಆಸರೆಯಾದರು. ಬಳಿಕ ಬಂದ ಗ್ಲೆನ್ ಮ್ಯಾಕ್ಸ್‌ವೆಲ್(24) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ನಂತರದಲ್ಲಿ ಕಣಕ್ಕಿಳಿದ ಲೋಮ್ರೋರ್(8), ಕಾರ್ತಿಕ್(6), ಹಸರಂಗ(0), ಹರ್ಷಲ್(1) ನಿರೀಕ್ಷಿತ ಆಟವಾಡಲಿಲ್ಲ. ಕೊನೆ ಹಂತದಲ್ಲಿ ಶಹಬಾಜ್ (12*) ರನ್‌ಗಳಿಸಿ ತಂಡದ ಮೊತ್ತ 157ಕ್ಕೇ ಏರಿಸಿದರು. ರಾಜಸ್ಥಾನ್ ಪರ ಅದ್ಭುತ ದಾಳಿ ನಡೆಸಿದ ಪ್ರಸಿದ್ಧ್ ಕೃಷ್ಣ ಹಾಗೂ ಮೆಕಾಯ್ ತಲಾ 3 ವಿಕೆಟ್ ಪಡೆದು ಮಿಂಚಿದರು.

ಬಟ್ಲರ್ ಭರ್ಜರಿ ಬ್ಯಾಟಿಂಗ್:
ಆರ್‌ಸಿಬಿ ನೀಡಿದ 158 ರನ್‌ಗಳ ಟಾರ್ಗೆಟ್ ಎದುರಿಸಿದ ರಾಜಸ್ಥಾನ್ ಮೊದಲ ವಿಕೆಟ್‌ಗೆ 61 ರನ್‌ಗಳ ಅದ್ಭುತ ಆರಂಭ ಪಡೆಯಿತು. ಯಶಸ್ವಿ ಜೈಸ್ವಾಲ್(21) ರನ್‌ಗಳಿಸಿ ಔಟಾದರೆ. ಮೊದಲ ಕ್ರಮಾಂಕದಲ್ಲಿ ನಾಯಕ ಸಂಜೂ ಸ್ಯಾಮ್ಸನ್(23) ರನ್‌ಗಳಿಸಿ ಔಟಾದರು. ಆದರೆ ಆರ್‌ಸಿಬಿ ಬೌಲಿಂಗ್ ದಾಳಿಯನ್ನ ಧೂಳಿಪಟ ಮಾಡಿದ ಜಾಸ್ ಬಟ್ಲರ್ 106* ರನ್ (60 ಬಾಲ್, 10 ಬೌಂಡರಿ, 6 ಸಿಕ್ಸ್) ಸ್ಪೋಟಕ ಶತಕ ಸಿಡಿಸಿದರು. ಪ್ರಸಕ್ತ ಸೀಸನ್‌ನಲ್ಲಿ 4ನೇ ಶತಕ ಬಾರಿಸಿದ ಬಟ್ಲರ್ ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಉಳಿದಂತೆ ಪಡಿಕ್ಕಲ್(9), ಹೆಟ್ಮಾಯೆರ್(2*) ರನ್‌ಗಳಿಸಿದರು. ಆರ್‌ಸಿಬಿ ಪರ ಹೇಜಲ್ವುಡ್ 2, ಹಸರಂಗ 1 ವಿಕೆಟ್ ಪಡೆದರು.

ಮೇ 29ರಂದು ಫೈನಲ್:
2022ರ ಐಪಿಎಲ್ ಫೈನಲ್ ಪಂದ್ಯ ಮೇ 29ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್ ಹಣಾಹಣಿಯಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.