ಗೆಲ್ಲಲೇಬೇಕಾದ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್, ನಿತೀಶ್ ರಾಣ(48*) ಹಾಗೂ ರಿಂಕು ಸಿಂಗ್(42*) ಅವರ ಅದ್ಭುತ ಜೊತೆಯಾಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಸತತ ಸೋಲಿನಿಂದ ಕಂಗೆಟ್ಟಿದ್ದ ಕೆಕೆಆರ್, ಗೆಲುವಿನ ಲಯ ಕಂಡುಕೊಂಡಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 152/5 ರನ್‌ಗಳಿಸಿತು. ಈ ಸವಾಲು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ 19.1 ಓವರ್‌ನಲ್ಲಿ 158 ರನ್‌ಗಳಿಸುವ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಕೆಕೆಆರ್, 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 8 ಪಾಯಿಂಟ್ಸ್ ಪಡೆದು 7ನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ 12 ಪಾಯಿಂಟ್ಸ್‌ನಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ನೀಡಿದ 153 ರನ್‌ಗಳ ಟಾರ್ಗೆಟ್ ಎದುರಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿರೀಕ್ಷಿತ ಆರಂಭ ಕಾಣಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಬಾಬಾ ಇಂದ್ರಜಿತ್(15) ಹಾಗೂ ಆರನ್ ಫಿಂಚ್(4) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಆದರೆ ನಂತರ ಕಣಕ್ಕಿಳಿದ ನಾಯಕ ಶ್ರೇಯಸ್ ಅಯ್ಯರ್ 34 ರನ್(32 ಬಾಲ್, 3 ಬೌಂಡರಿ, 1 ಸಿಕ್ಸ್) ಉಪಯುಕ್ತ ರನ್‌ಗಳಿಸಿ ಹೊರ ನಡೆದರು. ಅಲ್ಲದೇ ಶ್ರೇಯಸ್ ಅಯ್ಯರ್ ಹಾಗೂ ನಿತೀಶ್ ರಾಣಾ, 3ನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ರಾಣ-ರಿಂಕ್ ಜೊತೆಯಾಟ:
ನಿರ್ಣಾಯಕ ಹಂತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡ ಕೆಕೆಆರ್ ಸ್ವಲ್ಪಮಟ್ಟಿನ ಆತಂಕಕ್ಕೆ ಸಿಲುಕಿತು. ಆದರೆ ಈ ವೇಳೆ ಜೊತೆಯಾದ ನಿತೀಶ್ ರಾಣ 48* ರನ್(37 ಬಾಲ್, 3 ಬೌಂಡರಿ, 2 ಸಿಕ್ಸ್) ಹಾಗೂ ರಿಂಕು ಸಿಂಗ್ 42* ರನ್ (23 ಬಾಲ್, 6 ಬೌಂಡರಿ, 1 ಸಿಕ್ಸ್) ಜವಾಬ್ದಾರಿಯ ಆಟವಾಡಿದರು. ಅಲ್ಲದೇ 4ನೇ ವಿಕೆಟ್‌ಗೆ ಅಜೇಯ 66* ರನ್‌ಗಳ ಜೊತೆಯಾಟದಿಂದ ತಂಡವನ್ನ ಗೆಲುವಿನ ದಡಸೇರಿಸುವಲ್ಲಿ ಯಶಸ್ವಿಯಾದರು. ಕೆಕೆಆರ್ ಗೆಲುವಿಗೆ ಪ್ರಮುಖ ಕಾರಣರಾದ ರಿಂಕು ಸಿಂಗ್, ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ರಾಜಸ್ಥಾನ್ ರಾಯಲ್ಸ್ ಪರ ಟ್ರೆಂಟ್ ಬೋಲ್ಟ್(1/25), ಪ್ರಸಿದ್ಧ್ ಕೃಷ್ಣ(1/37) ಹಾಗೂ ಕುಲ್ದೀಪ್ ಸೇನ್(1/28) ವಿಕೆಟ್ ಪಡೆದರು.
SANJU SAMSON, IPL 2022, SPORTS KARNATAKAರಾಯಲ್ಸ್‌ಗೆ ಸಂಜೂ ಆಸರೆ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ್ ರಾಯಲ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕ್ಕಲ್(2) ಹಾಗೂ ಜಾಸ್ ಬಟ್ಲರ್(22) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ನಂತರ ಕಣಕ್ಕಿಳಿದ ಕರುಣ್ ನಾಯರ್(13) ಸಹ ನಿರೀಕ್ಷಿತ ಆಟವಾಡುವಲ್ಲಿ ವಿಫಲರಾದರು. ಆದರೆ ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಎಚ್ಚರಿಕೆಯಿಂದ ಆಡಿದ ನಾಯಕ ಸಂಜೂ ಸ್ಯಾಮ್ಸನ್ 54 ರನ್(49 ಬಾಲ್, 7 ಬೌಂಡರಿ, 1 ಸಿಕ್ಸ್) ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ 4ನೇ ಕ್ರಮಾಂಕದಲ್ಲಿ ಬಂದ ರಿಯಾನ್ ಪರಾಗ್(19) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಕೊನೆ ಹಂತದಲ್ಲಿ ಕಣಕ್ಕಿಳಿದ ಶಿಮ್ರಾನ್ ಹೆಟ್ಮಾಯೆರ್ 27*(13) ರನ್‌ಗಳು ಹಾಗೂ ಆರ್. ಅಶ್ವಿನ್ 6* ರನ್ ಕಲೆಹಾಕಿದರು. ಆ ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟುವಂತೆ ಮಾಡಿದರು.

ಕೆಕೆಆರ್ ಸಂಘಟಿತ ದಾಳಿ:
ಸಂಘಟಿತ ಬೌಲಿಂಗ್ ಪ್ರದರ್ಶಿಸಿದ ಕೆಕೆಆರ್ ಬೌಲರ್‌ಗಳು, ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಕೆಕೆಆರ್ ಪರ ಉಮೇಶ್ ಯಾದವ್(1/24), ಟಿಮ್ ಸೌಥಿ(2/46), ಅನುಕೂಲ್ ರಾಯ್(1/28), ಶಿವಂ ಮಾವಿ(1/33) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.