ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾದಾಗ ರೋಚಕ ಫಲಿತಾಂಶ ಹೊರಬಂದಿತ್ತು. ಕೊನೆಯ ಎರಡು ಎಸೆತಗಳಲ್ಲಿ 12 ರನ್ ಗುಜರಾತ್ ಗೆಲುವಿಗೆ ಬೇಕಿತ್ತು. ಒಡಿನ್ ಸ್ಮಿತ್ ಎಸೆದ ಕೊನೆಯ ಓವರ್ನ ಕೊನೆಯ 2 ಎಸೆತವನ್ನು ರಾಹುಲ್ ತೇವಾಟಿಯಾ ಸಿಕ್ಸರ್ ಗೆ ಅಟ್ಟಿದರು. ಗುಜರಾತ್ ಗೆದ್ದು ಬೀಗಿತು. ಆ ಸೋಲು ಪಂಜಾಬ್ ತಂಡದ ಆತ್ಮವಿಶ್ವಾಸವನ್ನೇ ಪ್ರಶ್ನೆ ಮಾಡಿತ್ತು. ಈಗ ಈ ಎರಡೂ ತಂಡಗಳು ಮತ್ತೆ ಮುಖಾಮುಖಿಯಾಗುತ್ತಿವೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮತ್ತೊಂದು ರೋಚಕ ಪಂದ್ಯ ನಡೆಯುವ ಸಾಧ್ಯತೆ ಇದೆ.
ಗುಜರಾತ್ ಟೈಟಾನ್ಸ್ 9 ಪಂದ್ಯಗಳಲ್ಲಿ 8ನ್ನು ಗೆದ್ದು 16 ಅಂಕ ಪಡೆದ ಅಗ್ರಸ್ಥಾನದಲ್ಲಿದೆ. ಇನ್ನೊಂದು ಗೆಲುವು ಟೈಟಾನ್ಸ್ ತಂಡದ ಪ್ಲೇ-ಆಫ್ ಸ್ಥಾನವನ್ನು ಗಟ್ಟಿ ಮಾಡುತ್ತದೆ. ಆದರೆ ಪಂಜಾಬ್ ಕಥೆಯೇ ವಿಭಿನ್ನ. 9 ಪಂದ್ಯಗಳಲ್ಲಿ 4ನ್ನು ಮಾತ್ರ ಗೆದ್ದಿರುವ ಪಂಜಾಬ್ 8 ಅಂಕ ಪಡೆದು 8ನೇ ಸ್ಥಾನದಲ್ಲಿದೆ.
ಗುಜರಾತ್ ತಂಡದಲ್ಲಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ. ಡೇವಿಡ್ ಮಿಲ್ಲರ್ ಕೈಯಲ್ಲಿ ಸಾಧ್ಯವಾಗಿಲ್ಲ ಅಂದರೆ ರಾಹುಲ್ ತೇವಾಟಿಯಾ ಇದ್ದಾರೆ. ತೇವಾಟಿಯಾ ಕೈಯಿಂದಲೂ ಸಾಧ್ಯವಿಲ್ಲದಿದ್ದರೆ ರಶೀದ್ ಖಾನ್ ಇದ್ದಾರೆ. ಹಾರ್ದಿಕ್ ಪಾಂಡ್ಯಾ, ಶುಭ್ಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹಾ ಬ್ಯಾಟಿಂಗ್ ಶಕ್ತಿಯೂ ಇದೆ.
ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಪ್ರದೀಪ್ ಸಂಗ್ವಾನ್ ಮತ್ತು ಲೊಕಿ ಫರ್ಗ್ಯೂಸನ್ ವೇಗದ ಬೌಲಿಂಗ್ ಶಕ್ತಿಗಳು. ರಶೀದ್ ಖಾನ್ ಸ್ಪಿನ್ ಮೂಲಕ ಖೆಡ್ಡಾ ತೋಡುತ್ತಾರೆ. ಇನ್ನೂ ಬೌಲಿಂಗ್ ಬೇಕು ಅಂದರೆ ಹಾರ್ದಿಕ್ ಪಾಂಡ್ಯಾ ಮತ್ತು ರಾಹುಲ್ ತೇವಾಟಿಯಾ ಕೂಡ ಇದ್ದಾರೆ.
ಪಂಜಾಬ್ ಕಿಂಗ್ಸ್ ಸಮಸ್ಯೆ ದೊಡ್ಡದಿದೆ. ಮಾಯಾಂಕ್ ಅಗರ್ವಾಲ್ ಫಾರ್ಮ್ ನಲ್ಲಿಲ್ಲ. ಶಿಖರ್ ಧವನ್ ಮಿಂಚಿದರೂ ವೇಗದ ಆಟ ಬರುತ್ತಿಲ್ಲ. ಭಾನುಕಾ ರಾಜಪಕ್ಸ ಮತ್ತು ಲಿಯಂ ಲಿವಿಂಗ್ ಸ್ಟೋನ್ ಸಿಕ್ಸರ್ ಕಿಂಗ್ ಗಳಾದರೂ ಉಳಿದವರಿಂದ ಬೆಂಬಲ ಇಲ್ಲ. ಜಾನಿ ಬೇರ್ ಸ್ಟೋವ್ ತಂಡದ ನೆರವಿಗೆ ಬಂದಿಲ್ಲ. ಜಿತೇಶ್ ಶರ್ಮಾ, ರಿಶಿ ಧವನ್ ಅವಕಾಶ ಬಳಸಿಕೊಂಡರೂ ಇಂಪ್ರೆಸ್ಸಿವ್ ಆಗಿಲ್ಲ.
ಬೌಲಿಂಗ್ನಲ್ಲಿ ಕಗಿಸೋ ರಬಾಡಾ ಮತ್ತು ಅರ್ಶದೀಪ್ ಬಗ್ಗೆ ಮಾತಿಲ್ಲ. ಸಂದೀಪ್ ಶರ್ಮಾ ಕಂಟ್ರೋಲ್ ನಲ್ಲಿದ್ದರೂ ವಿಕೆಟ್ ಬೀಳುತ್ತಿಲ್ಲ.ರಾಹುಲ್ ಚಹರ್ಗೆ ಸರಿಯಾದ ಜೊತೆಗಾರರು ಸಿಗುತ್ತಿಲ್ಲ. ರಿಶಿ ಧವನ್ ಮತ್ತು ಲಿವಿಂಗ್ ಸ್ಟೊನ್ 5ನೇ ಬೌಲರ್ ಕಾರ್ಯ ನಿರ್ವಹಣೆ ಮಾಡುವುದು ಅನಿವಾರ್ಯ.
ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಚೇಸಿಂಗ್ ಕಷ್ಟವಲ್ಲ. ಆದರೆ ಚೇಸ್ ಮಾಡುವ ಸಾಮರ್ಥ್ಯ ಯಾರಿಗೆ ಇದೆ ಅನ್ನುವುದೇ ಪ್ರಶ್ನೆ.