IPL 2022- RCB – ಆರ್ ಸಿಬಿ ಅಭಿಮಾನಿಗಳ ಅಭಿಮಾನ ಮತ್ತು ಪ್ರೀತಿಗೊಂದು ಸಲಾಂ…!
ಆರ್ ಸಿಬಿ ಅಭಿಮಾನಿಗಳ ಅಭಿಮಾನದ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಹುಶಃ ವಿಶ್ವ ಕ್ರೀಡಾ ರಂಗದಲ್ಲಿ ಆರ್ ಸಿಬಿ ಅಭಿಮಾನಿಗಳ ಹಾಗೇ ಮತ್ತೊಂದು ಅಭಿಮಾನಿಗಳ ಬಳಗ ಸಿಗೋದೇ ಇಲ್ಲ. ತಂಡ ಸೋಲಲಿ, ಗೆಲ್ಲಲಿ, ಕಪ್ ಗೆಲ್ಲದಿದ್ರೂ ಆರ್ ಸಿಬಿ ಮೇಲಿನ ಪ್ರೀತಿ ಒಂಚೂರು ಕಮ್ಮಿಯಾಗುವುದಿಲ್ಲ. ಎಂದೆಂದಿಗೂ ಆರ್ ಸಿಬಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಅಭಿಮಾನಿಗಳ ಬಳಗವಿದ್ರೆ ಅದು ಆರ್ ಸಿಬಿ ಅಭಿಮಾನಿಗಳ ಬಳಗ ಮಾತ್ರ.
ಕಳೆದ 15 ವರ್ಷಗಳಿಂದ ಆರ್ ಸಿಬಿ ಕಪ್ ಗೆದ್ದಿಲ್ಲ. ಆದ್ರೂ ಪ್ರತಿ ಐಪಿಎಲ್ ಟೂರ್ನಿ ಶುರುವಾದಾಗ ಈ ಸಲ ಕಪ್ ನಮ್ದೆ ಅಂತ ಅಭಿಯಾನ ಶುರು ಮಾಡುತ್ತಾರೆ. ಟೂರ್ನಿಯಿಂದ ಆರ್ ಸಿಬಿ ಹೊರಬಿದ್ದಾಗ ಮುಂದಿನ ಸಲ ಕಪ್ ನಮ್ದೆ ಅಂತ ಹೇಳುತ್ತಾರೆ. ಇದು ಆರ್ ಸಿಬಿ ಅಭಿಮಾನಿಗಳ ಪ್ರೀತಿ ಮತ್ತು ಅಭಿಮಾನ. ಈ ಅಭಿಮಾನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರೀಡಾ ಜಗತ್ತೇ ಸಲಾಂ ಅನ್ನುತ್ತಿದೆ.
ಹೌದು. ಆರ್ ಸಿಬಿ ಅಂದ್ರೆ ಬರೀ ತಂಡವಲ್ಲ. ಇಲ್ಲಿ ಭಾಷೆ, ಧರ್ಮ, ರಾಜ್ಯದ ಇತಿಮಿತಿಗಳಿಲ್ಲ. ಆರ್ ಸಿಬಿ ಅಂದ್ರೆ ಬಾಂಧವ್ಯ. ಆರ್ ಸಿಬಿ ಅಂದ್ರೆ ಪ್ರೀತಿ. ತಂಡದಲ್ಲಿ ಕರ್ನಾಟಕದ ಆಟಗಾರರು ಇಲ್ಲದಿದ್ರೂ ಕೂಡ ನಮ್ಮವರು ಎಂಬ ಭಾವನೆ ಇದೆ. ತಂಡದ ಹೆಸರಿನಲ್ಲಿ ಬೆಂಗಳೂರು ಎಂಬ ಪದಕ್ಕಂತೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಆರ್ ಸಿಬಿ ಅಂತ್ಯಂತ ಜನಪ್ರಿಯ ತಂಡವಾಗಿ ಹೊರಹೊಮ್ಮಿದ್ದರು.
ಹಾಗೇ ನೋಡಿದ್ರೆ ತಂಡದಲ್ಲಿ ಕನ್ನಡಿಗರಿಲ್ಲ. ಎದುರಾಳಿ ತಂಡದಲ್ಲಿ ಕನ್ನಡಿಗ ಆಟಗಾರರು ಇದ್ರೂ ಕೂಡ ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ತಂಡವನ್ನು ಬಿಟ್ಟುಕೊಡುವುದಿಲ್ಲ.
ಇನ್ನು ಆರ್ ಸಿಬಿ ವಿರುದ್ಧ ಟೀಕೆ ಮಾಡಿದ್ರೆ ಆರ್ ಸಿಬಿ ಅಭಿಮಾನಿಗಳ ಬಾಯಿಂದ ಬರುವ ಮಾತುಗಳೇ ಬೇರೆಯದ್ದೇ ಆಗಿರುತ್ತದೆ. ನಮ್ಮವರಿಲ್ಲದಿದ್ರೂ ಪರವಾಗಿಲ್ಲ.. ಆರ್ ಸಿಬಿ ತಂಡವನ್ನು ಮಾತ್ರ ಬಿಟ್ಟುಕೊಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟರ ಮಟ್ಟಿಗೆ ಆರ್ ಸಿಬಿ ತಂಡವನ್ನು ಆರ್ ಸಿಬಿ ಅಭಿಮಾನಿಗಳು ತಮ್ಮ ಹೃದಯದಲ್ಲಿ ಸ್ಥಾನವನ್ನು ಕೊಟ್ಟಿದ್ದಾರೆ.
ಆದ್ರೆ ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಗಳನ್ನು ಪ್ರತಿ ಬಾರಿಯೂ ಆರ್ ಸಿಬಿ ಹುಸಿಗೊಳಿಸುತ್ತಿದೆ. ಪ್ರತಿ ಋತುವಿನಲ್ಲಿ ಮಾಡುತ್ತಿರುವ ಒಂದೊಂದು ಎಡವಟ್ಟುಗಳು ಕೂಡ ತಂಡದ ಮೇಲೆ ಗಾಢವಾದ ಪರಿಣಾಮ ಬೀರುವಂತೆ ಮಾಡುತ್ತಿದೆ.
ಮುಖ್ಯವಾಗಿ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ದೂರದೃಷ್ಟಿಯನ್ನು ಹೊಂದಿಲ್ಲ. ತಂಡದಲ್ಲಿ ಯುವ ಆಟಗಾರರಿಗೆ ಸರಿಯಾದ ಅವಕಾಶವನ್ನು ನೀಡುತ್ತಿಲ್ಲ. ಅವರ ಪ್ರತಿಭೆ ಮತ್ತು ಸಾಮಥ್ರ್ಯದ ಮೇಲೆ ನಂಬಿಕೆಯನ್ನಿಟ್ಟುಕೊಳ್ಳುವುದಿಲ್ಲ. ಏನಿದ್ರೂ ಸೀನಿಯರ್ ಮತ್ತು ಸ್ಟಾರ್ ಆಟಗಾರರನ್ನು ಹೆಚ್ಚು ಅವಲಂಬಿತವಾಗಿದೆ. ಹೀಗಾಗಿಯೇ ಬಲಿಷ್ಠ ತಂಡವನ್ನು ಕಟ್ಟಲು ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಎಡವುತ್ತಿದೆ. IPL 2022- RCB -RCB – Say it LOUD, Say it PROUD Royal Challengers Bangalore
ಆದ್ರೆ ಈ ಎಲ್ಲಾ ವಿಚಾರಗಳು ಆರ್ ಸಿಬಿ ಅಭಿಮಾನಿಗಳಿಗೆ ಗೊತ್ತಿಲ್ಲದ ವಿಷಯಗಳು ಏನಲ್ಲ. ಆದ್ರೂ ಆರ್ ಸಿಬಿಯನ್ನು ಬಿಟ್ಟುಕೊಡುವ ಮಾತೇ ಇಲ್ಲ.
ಇದೀಗ 15ನೇ ಆವೃತ್ತಿಯ ಟೂರ್ನಿಯಲ್ಲೂ ಆರ್ ಸಿಬಿ ನಿರಾಸೆ ಅನುಭವಿಸಿದೆ. ಸಾಮಾಜಿಕ ಜಾಲ ತಾಣದಲ್ಲಿ ಆರ್ ಸಿಬಿ ತಂಡ ಮತ್ತು ಆಟಗಾರರು ಟ್ರೋಲ್ ಆಗುತ್ತಿದ್ದಾರೆ. ಆದ್ರೂ ಆರ್ ಸಿಬಿ ಅಭಿಮಾನಿಗಳು ತಲೆಕೆಡಿಸಿಕೊಂಡಿಲ್ಲ. ಆರ್ ಸಿಬಿ ಮೇಲಿನ ಅಭಿಮಾನ ಮತ್ತು ಪ್ರೀತಿಯ ಮೂಲಕವೇ ಟ್ರೋಲ್ ಗಳಿಗೂ ಉತ್ತರ ನೀಡುತ್ತಾರೆ. ಅಭಿಮಾನ ಇಂದ್ರೆ ಹೀಗಿರಬೇಕು ಅಂತ ಆರ್ ಸಿಬಿ ಅಭಿಮಾನಿಗಳು ಸಾರಿ ಸಾರಿ ಹೇಳುತ್ತಿದ್ದಾರೆ.
ಒಂದಂತೂ ಸತ್ಯ.. ಆರ್ ಸಿಬಿ ಫ್ರಾಂಚೈಸಿಯು ತನ್ನ ಅಭಿಮಾನಿಗಳ ಜೊತೆಗೆ ನಿಕಟವಾದ ಬಾಂಧವ್ಯವನ್ನು ವೃದ್ದಿಸಿಕೊಂಡಿದೆ. ಆಟಗಾರರ ಮತ್ತು ಅಭಿಮಾನಿಗಳ ನಡುವೆ ಕೊಂಡಿಯಾಗಿ ಆರ್ ಸಿಬಿ ಪ್ರಾಂಚೈಸಿಯು ತನ್ನ ಸಾಮಾಜಿಕ ಜಾಲ ತಾಣವನ್ನು ಬಳಕೆ ಮಾಡಿಕೊಳ್ಳುತ್ತಿದೆ. ತಂಡದ ಪ್ರತಿ ಅಪ್ ಡೆಟ್ಸ್ ಗಳನ್ನು ತಮ್ಮ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದೆ. ಬಹುಶಃ ಇದೇ ಕಾರಣದಿಂದಾಗಿ ಆರ್ ಸಿಬಿ ಅಭಿಮಾನಿಗಳು ಆರ್ ಸಿಬಿ ತಂಡವನ್ನು ಇಷ್ಟಪಡಲು ಕಾರಣ ಅನ್ಸುತ್ತೆ.
ಒಟ್ಟಿನಲ್ಲಿ ಮುಂದಿನ ಬಾರಿಯಾದ್ರೂ ಇಡೀ ತಂಡವನ್ನು ಬದಲಾವಣೆ ಮಾಡಿಕೊಂಡು ಬಲಿಷ್ಠ ತಂಡವನ್ನು ಕಟ್ಟಲಿ… ಆರ್ ಸಿಬಿ ಅಭಿಮಾನಿಗಳನ್ನು ಮತ್ತೆ ನಿರಾಸೆಗೊಳಿಸುವುದು ಬೇಡ. ಅದಕ್ಕೆ ಈಗಿನಿಂದಲೇ ಆರ್ ಸಿಬಿ ಫ್ರಾಂಚೈಸಿ ತಯಾರು ಮಾಡಿಕೊಳ್ಳಲಿ. ಆಗಲಾದ್ರೂ ಕಪ್ ಗೆಲ್ಲಲಿ..ಕನಿಷ್ಠ ಒಂದು ಸಲವಾದ್ರೂ ಕಪ್ ಗೆಲ್ಲಲಿ. ಆರ್ ಸಿಬಿ ಅಭಿಮಾನಿಗಳ ಕೊರಗನ್ನು ನೀಗಿಸಲಿ… ಯಾವುದಕ್ಕೂ ಕಾಲವೇ ಉತ್ತರ ನೀಡಬಹುದು…!