ಮಧ್ಯಮ ಕ್ರಮಾಂಕದಲ್ಲಿ ಎದುರಾದ ನಾಟಕೀಯ ಕುಸಿತದ ನಡುವೆಯೂ ಬಲಿಷ್ಠ ಕಮ್ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದಿನೇಶ್ ಕಾರ್ತಿಕ್(44*) ಹಾಗೂ ಶಹಬಾಜ್ ಅಹ್ಮದ್(45) ಅವರ ದಿಟ್ಟ ಬ್ಯಾಟಿಂಗ್ನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 3 ವಿಕೆಟ್ಗೆ 169 ರನ್ ಕಲೆಹಾಕಿತು. ಪೈಪೋಟಿ ಮೊತ್ತ ಎದುರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 19.1 ಓವರ್ನಲ್ಲಿ 173/6 ರನ್ಗಳಿಸಿ ಗೆಲುವಿನ ದಡಸೇರಿತು. ಆ ಮೂಲಕ 15ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ, 3 ಪಂದ್ಯಗಳಲ್ಲಿ 2ನೇ ಗೆಲುವು ಕಂಡಿತು.
ಆರ್ಸಿಬಿ ನಾಟಕೀಯ ಕುಸಿತ:
ರಾಜಸ್ಥಾನ್ ನೀಡಿದ ಸವಾಲು ಬೆನ್ನತ್ತಿದ ಬೆಂಗಳೂರು ತಂಡಕ್ಕೆ ನಾಯಕ ಫಾಫ್ ಡುಪ್ಲೆಸ್ಸಿ(29) ಹಾಗೂ ಅನುಜ್ ರಾವತ್(26) ಮೊದಲ ವಿಕೆಟ್ಗೆ 55 ರನ್ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಇವರಿಬ್ಬರ ನಿರ್ಗಮನದ ನಂತರ ಬಂದ ವಿರಾಟ್ ಕೊಹ್ಲಿ(5), ಡೇವಿಡ್ ವಿಲ್ಲಿ(0) ಹಾಗೂ ಶೆರ್ಫಾನೆ ರುಥರ್ಫಾರ್ಡ್(5) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಕೇವಲ 32 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು. ಪರಿಣಾಮ ಸುಲಭದ ಗೆಲುವಿನ ನಿರೀಕ್ಷೆಯಲ್ಲಿದ್ದ ತಂಡಕ್ಕೆ ದೊಡ್ಡ ಆಘಾತ ಎದುರಾಯಿತು.
ಕಾರ್ತಿಕ್-ಶಹಬಾಜ್ ಕಮಾಲ್:
87 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ 44* ರನ್ (23 ರನ್, 7 ಬೌಂಡರಿ, 1 ಸಿಕ್ಸ್ ) ಹಾಗೂ ಶಹಬಾಜ್ ಅಹ್ಮದ್ 45 ರನ್ (26 ರನ್, 4 ಬೌಂಡರಿ, 3 ಸಿಕ್ಸ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ್ ಬೌಲರ್ಗಳ ಮೇಲೆ ನಿಧಾನ ಗತಿಯಲ್ಲಿ ಪ್ರಾಬಲ್ಯ ಸಾಧಿಸಿದ ಈ ಜೋಡಿ, 6ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ರಾಜಸ್ಥಾನ್ ಪರ ಯಜು಼ವೇಂದ್ರ ಚಹಲ್(2/15), ಟ್ರೆಂಟ್ ಬೌಲ್ಟ್(2/34) ಹಾಗೂ ಸೈನಿ(1/36) ವಿಕೆಟ್ ಪಡೆದರು.
ಅಬ್ಬರಿಸಿದ ಜಾಸ್ ಬಟ್ಲರ್:
ಇದಕ್ಕೂ ಮುನ್ನಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್, ಆರಂಭಿಕ ಆಘಾತ ಕಂಡಿತು. ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ನಾಯಕ ಸಂಜೂ ಸ್ಯಾಮ್ಸನ್(8) ಬಹುಬೇಗನೆ ನಿರ್ಗಮಿಸಿದರು. ಆದರೆ 2ನೇ ವಿಕೆಟ್ಗೆ ಜೊತೆಯಾದ ಜಾಸ್ ಬಟ್ಲರ್ 70* ರನ್ (47 ಬಾಲ್, 6 ಸಿಕ್ಸ್), ಹಾಗೂ ದೇವದತ್ ಪಡಿಕ್ಕಲ್ 37 ರನ್ (29 ಬಾಲ್, 2 ಬೌಂಡರಿ, 2 ಸಿಕ್ಸ್), ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು 70 ರನ್ಗಳ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಪಡಿಕ್ಕಲ್ ಔಟಾದ ನಂತರ ಬಂದ ಶಿಮ್ರಾನ್ ಹೆಟ್ಮಾಯರ್ 42* ರನ್ (31 ಬಾಲ್, 4 ಬೌಂಡರಿ, 2 ಸಿಕ್ಸ್) ಸಹ ಉತ್ತಮ ಆಟವಾಡಿದರು. ಆರ್ಸಿಬಿ ಪರ ಡೇವಿಡ್ ವಿಲ್ಲಿ, ವನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.