ರಾಜಸ್ಥಾನ್ ರಾಯಲ್ಸ್ ತಂಡದ ಆಲ್ರೌಂಡರ್ರಿ ಯಾನ್ ಪರಾಗ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹರ್ಷಲ್ ಪಟೇಲ್, ಮೈದಾನದಲ್ಲಿ ಕಾವೇರಿದ ಮಾತಿನ ಚಕಮಕಿ ನಡೆಸಿದರು.
ಪುಣೆಯಲ್ಲಿ ನಡೆದ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಈ ನಡುವೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್, ತಂಡಕ್ಕೆ ಬ್ಯಾಟಿಂಗ್ ಆಸರೆಯಾದ ರಿಯಾನ್ ಪರಾಗ್, ಇನ್ನಿಂಗ್ಸ್ ನ 20ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ 18 ರನ್ ಸಿಡಿಸಿದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 144 ರನ್ಗಳಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಿಯಾನ್ ಪರಾಗ್, 31 ಬಾಲ್ ನಲ್ಲಿ 56* ರನ್ ಗಳಿಸಿದರು. ಅಲ್ಲದೇ ಕೊನೆಯ ಓವರ್ ನಲ್ಲಿ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿ ಅಬ್ಬರಿಸಿದರು.
ಇದರಿಂದ ಅಸಮಾಧಾನಗೊಂಡ ಹರ್ಷಲ್ ಪಟೇಲ್, ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ ನಡೆಸಿದರು. ಇದಾದ ಬಳಿಕ ಇನ್ನಿಂಗ್ಸ್ ಮುಕ್ತಾಯಗೊಂಡು ಎರಡು ತಂಡಗಳ ಆಟಗಾರರು ಪೆವಿಲಿಯನ್ ಕಡೆಗೆ ತೆರಳುತ್ತಿರುವ ವೇಳೆಯೂ ಹರ್ಷಲ್ ಪಟೇಲ್ ಹಾಗೂ ರಿಯಾನ್ ಪರಾಗ್ ನಡುವಿನ ಮಾತಿನ ಚಕಮಕಿ ಮುಂದುವರೆಯಿತು. ಈ ವೇಳೆ ಮಧ್ಯಪ್ರವೇಶಿಸಿದ ರಾಜಸ್ಥಾನ್ ತಂಡದ ಸಹ ಆಟಗಾರರು, ಇಬ್ಬರನ್ನು ಸಮಾಧಾನಪಡಿಸಿದರು.
ಹ್ಯಾಂಡ್ ಶೇಕ್ ಮಾಡದ ಪಟೇಲ್:
ಇಬ್ಬರು ಆಟಗಾರರ ನಡುವಿನ ಮುಸುಕಿನ ಕಾದಾಟ ಪಂದ್ಯ ಮುಗಿದ ಬಳಿವೂ ತಣ್ಣಗಾಗಿರಲಿಲ್ಲ. ಆರ್ಸಿಬಿ ಪರ ಕೊನೆಯವರಾಗಿ ಔಟಾದ ಹರ್ಷಲ್ ಪಟೇಲ್, ರಿಯಾನ್ ಪರಾಗ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿ ಶುಭಕೋರಿದರು. ಈ ವೇಳೆ ತಮ್ಮ ಮುನಿಸು ಮುಂದುವರಿಸಿದ ಹರ್ಷಲ್ ಪಟೇಲ್, ರಿಯಾನ್ ಪರಾಗ್ ಅವರಿಗೆ ಹ್ಯಾಂಡ್ ಶೇಕ್ ಮಾಡದೆ ಮುಂದೆ ಸಾಗಿದರು. ಹರ್ಷಲ್ ಪಟೇಲ್ ಅವರ ಈ ವರ್ತನೆ ರಿಯಾನ್ ಪರಾಗ್ ಮಾತ್ರವಲ್ಲದೇ ಇತರ ಆಟಗಾರರನ್ನು ತಬ್ಬಿಬ್ಬಾಗಿಸಿತು.