IPL 2022- DC – Rovman Powell – ಮೇಕೆ ಮೇಯಿಸುತ್ತಿದ್ದ ಹುಡುಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾಚ್ ಫಿನಿಶರ್..!

ನನಗೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಕೊಡಿ. ನನ್ನನ್ನು ನಂಬಿ. ಹಾಗಂತ ಎಸ್ ಆರ್ ಎಚ್ ಪಂದ್ಯಕ್ಕೆ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಬಳಿ ಹೇಳಿದ್ದು ರೊವ್ಮನ್ ಪೊವೆಲ್.
ಹೌದು, ರೊವ್ಮನ್ ಪೊವೆಲ್ ಮನವಿಯನ್ನು ರಿಷಬ್ ಪಂತ್ ತಿರಸ್ಕರಿಸಲಿಲ್ಲ. ಹೆಡ್ ಕೋಚ್ ಜೊತೆ ಮಾತನಾಡಿ ರೊವ್ಮನ್ ಗೆ ಅವಕಾಶ ಮಾಡಿಕೊಟ್ಟರು. ಎಸ್ ಆರ್ ಎಚ್ ವಿರುದ್ಧ 35 ಎಸೆತಗಳಲ್ಲಿ ಅಜೇಯ 67 ರನ್ ದಾಖಲಿಸಿದ್ರು. ರಿಷಬ್ ಪಂತ್ ಗೆ ಕೊಟ್ಟ ಮಾತನ್ನು ಉಳಿಸಿಕೊಂಡ್ರು.
ಯಾರಿದು ರೊವ್ಮನ್ ಪೊವೆಲ್. ?
ವೆಸ್ಟ್ ಇಂಡೀಸ್‍ನ ಹೊಡಿಬಡಿ ಆಟಗಾರ. ಸವಾಲುಗಳನ್ನು ಎದುರಿಸುವಾಗ ರೊವ್ಮನ್ ಅವರಿಗೆ ಯಾವುದೇ ಒತ್ತಡಗಳಿರುವುದಿಲ್ಲ. ಯಾಕಂದ್ರೆ ತನ್ನ ಬದುಕಿನ ಪ್ರತಿ ಕ್ಷಣ, ಪ್ರತಿ ದಿನ ಕೂಡ ಸವಾಲುಗಳನ್ನು ಎದುರಿಸಿದ್ದರು. ಹೀಗಾಗಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದರಲ್ಲೇ ಸಂತಸವನ್ನು ಕಾಣುತ್ತಿದ್ದಾರೆ.

ಹೌದು, ರೊವ್ಮನ್ ಪೊವೆಲ್ ಅವರ ತಂದೆ ಯಾರು ಎಂದು ಅವರಿಗೆ ಗೊತ್ತಿಲ್ಲ. ಗÀರ್ಭಿಣಿ ತಾಯಿಯನ್ನು ಬಿಟ್ಟು ಹೋದ ಅಪ್ಪನನ್ನು ಹುಡುಕುವ ಪ್ರಯತ್ನವನ್ನು ಮಾಡಲಿಲ್ಲ. ಗರ್ಭಪಾತ ಮಾಡಿಕೊಳ್ಳುವಂತೆ ರೊವ್ಮನ್ ತಾಯಿ ಜೋನ್ ಪ್ಲಮ್ಮರ್ ಅವರನ್ನು ಒತ್ತಾಯ ಮಾಡಿದ್ದ ಪಾಪಿ ತಂದೆಯ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ.
ಯಾಕಂದ್ರೆ ಹುಟ್ಟಿದಾಗಿನಿಂದ ತಾಯಿ ಜೋನ್ ಪ್ಲಮ್ಮರ್ ಬೇರೆಯವರ ಮನೆಯಲ್ಲಿ ಬಟ್ಟೆ, ಪಾತ್ರೆ ತೊಳೆದು ಮಕ್ಕಳನ್ನು ಸಾಕಿದ್ದರು. ರೊವ್ಮನ್ ಪೊವೆಲ್ ಗೆ ಒಬ್ಬಳು ಸಹೋದರಿ ಇದ್ದಾಳೆ. ತಾಯಿ ಮತ್ತು ಸಹೋದರಿ ರೊವ್ಮನ್ ಪೊವೆಲ್ ಬದುಕಿನ ಸರ್ವಸ್ವ. ಅದನ್ನು ಬಿಟ್ರೆ ಕ್ರಿಕೆಟ್ಟೇ ಜಗತ್ತಾಗಿತ್ತು.

ತಮಗಾಗಿ ತಾಯಿ ಕಷ್ಟಪಡುತ್ತಿದ್ದ ದಿನಗಳನ್ನು ರೊವ್ಮನ್ ಪೊವೆಲ್ ಮರೆತಿಲ್ಲ. ಸಣ್ಣ ಮನೆ. ಜೋರಾಗಿ ಮಳೆ ಬಂದ್ರೆ ನೀರು ಮನೆ ಸೇರುತ್ತಿತ್ತು. ಜಮೈಕಾದ ಸಣ್ಣ ಸಮುದಾಯದಿಂದ ಬೆಳೆದು ಬಂದಿರುವ ರೊವ್ಮನ್ ಪೊವೆಲ್ ಗೆ ಕಷ್ಟ ಏನು ಎಂಬುದು ಚೆನ್ನಾಗಿ ಗೊತ್ತಿದೆ.
ಆರನೇ ತರಗತಿಯಲ್ಲಿ ಓದುತ್ತಿದ್ದಾಗ ರೊವ್ಮನ್ ಪೊವೆಲ್ ಬದುಕಿಗೆ ಒಂದು ತಿರುವು ಸಿಕ್ಕಿತ್ತು. ಶಿಕ್ಷಕ ನಿಕೊಲಾಸ್ ಧಿಲ್ಹಾನ್ ಅವರು ಶಾಲಾ ಚಟುವಟಿಕೆಯಲ್ಲಿ ತಮ್ಮ ತಂದೆಯ ಬಗ್ಗೆ ಏನಾದ್ರೂ ಹೇಳಿ ಎಂದು ಮಕ್ಕಳಿಗೆ ಹೇಳುತ್ತಿದ್ದರು. ಆಗ ರೊವ್ಮನ್ ಪೊವೆಲ್ ನಾನು ಹೇಳುವುದಿಲ್ಲ. ನನಗೆ ತಂದೆ ಇಲ್ಲ ಎಂದು ಹೇಳಿದ್ರು. ನಂತರ ಪೊವೆಲ್ ಅವರ ಕಣ್ಣೀರಿನ ಕಥೆ ಕೇಳಿದ ಶಿಕ್ಷಕ ನಿಕೊಲಾಸ್ ಅವರು ರೊವ್ಮನ್ ಪೊವೆಲ್ ಗೆ ಗಾಡ್ ಫಾದರ್ ಆಗಿದ್ದರು.
ಶಾಲೆಯ ಜೊತೆಗೆ ರೊವ್ಮನ್ ಪೊವೆಲ್ ಮೇಕೆ ಕೂಡ ಮೇಯಿಸುತ್ತಿದ್ದ. ಮೇಕೆ ಸಾಕಾಣೆ ಮಾಡಿಕೊಂಡು ತನ್ನ ತಾಯಿಗೆ ನೆರವಾಗುತ್ತಿದ್ದರು. ಆದ್ರೆ ರೊವ್ಮನ್ ಪೊವೆಲ್ ಅವರಲ್ಲಿ ಅದ್ಭುತ ಕ್ರಿಕೆಟ್ ಪ್ರತಿಭೆ ಇದೆ ಎಂದು ಯಾರಿಗೂ ತಿಳಿದಿರಲಿಲ್ಲ.
ಹೀಗೆ ಕಷ್ಟದ ಜೀವನ ಸಾಗಿಸುತ್ತಿದ್ದ ರೊವ್ಮನ್ ಪೊವೆಲ್ ಕೈಯಲ್ಲಿ ಬ್ಯಾಟ್ ಹಿಡಿದುಕೊಂಡು ತನ್ನ ತಾಯಿಯ ಬಳಿ ಈ ರೀತಿ ಹೇಳುತ್ತಾರೆ. ನಾನು ಕ್ರಿಕೆಟಿಗನಾಗುತ್ತೇನೆ. ನಮ್ಮ ಕಷ್ಟದ ದಿನಗಳು ಕ್ರಿಕೆಟ್ ನಿಂದಲೇ ದೂರವಾಗುತ್ತದೆ ಎಂದು ಹೇಳ್ತಾರೆ. ತಾಯಿ ಮಗನ ಆಸೆಗೆ ಅಡ್ಡಿಯಾಗಲಿಲ್ಲ. ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದ ರೊವ್ಮನ್ ಪೊವೆಲ್ ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲೂ ಸ್ಥಾನ ಪಡೆಯುತ್ತಾರೆ. ಅಲ್ಲದೆ ಏಕದಿನ ತಂಡಕ್ಕೂ ನಾಯಕನಾಗುತ್ತಾರೆ. IPL 2022- DC – Rovman Powell -rise from poverty to cricketing riches

8ರ ಹರೆಯದ ರೊವ್ಮನ್ ಪೊವೆಲ್ ಈಗ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಸಿಪಿಎಲ್ ನಲ್ಲೂ ಸದ್ದು ಮಾಡಿದ್ದರು. ಕಳೆದ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಅಂದ ಹಾಗೇ ರೊವ್ಮನ್ ಪೊವೆಲ್ ಮೈದಾನದಲ್ಲಿ ಯಾವುದೇ ಬೌಲರ್ ಗಳಿಗೂ ಹೆದರುವುದಿಲ್ಲ. ಯಾವುದೇ ಸವಾಲುಗಳಿದ್ರೂ ಒತ್ತಡಕ್ಕೆ ಸಿಲುಕುವುದಿಲ್ಲ. ತನ್ನ ಬದುಕಿನ ಸವಾಲುಗಳನ್ನು ನೆನೆಪು ಮಾಡಿಕೊಂಡು ಬ್ಯಾಟ್ ಬೀಸ್ತಾರೆ. ತನ್ನ ತಾಯಿ ಮತ್ತು ಸಹೋದರಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕಾಗಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ತನ್ನೊಳಗೆ ಹೇಳಿಕೊಂಡು ಆಟವಾಡುತ್ತಾರೆ.

ಹೀಗಾಗಿಯೇ ಉಮ್ರಾನ್ ಅಕ್ಮಲ್ ಅವರ ಬೆಂಕಿ ಎಸೆತಗಳು ಕೂಡ ರೊವ್ಮನ್ ಪೊವೆಲ್ ಅವರಿಗೆ ಸವಾಲೇ ಆಗಲಿಲ್ಲ.
ಮೇಕೆ, ಕುರಿ ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದ ರೊವ್ಮನ್ ಪೊವೆಲ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‍ನಾಗಿದ್ದಾರೆ. ಬಟ್ಟೆ ಒಗೆಯುತ್ತಿದ್ದ ತಾಯಿಗೆ ಸುಂದರವಾದ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಸಹೋದರಿಯ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಮೈದಾನದಲ್ಲಿ ಕೈಯಲ್ಲಿ ಬ್ಯಾಟ್ ಹಿಡಿದು ಆಟಕ್ಕೆ ನಿಂತ್ರೆ ರೊವ್ಮನ್ ಪೊವೆಲ್ ಗೆ ನೆನಪಾಗೋದು ತನ್ನ ತಾಯಿ ಕಷ್ಟ ಪಟ್ಟ ದಿನಗಳು ಮಾತ್ರ.
ಬದುಕು ಎಷ್ಟು ವಿಚಿತ್ರವಾಗಿದೆ ಅಲ್ವಾ.. ಪ್ರತಿಭೆ ಯಾರ ಸ್ವತ್ತು ಅಲ್ಲ. ಆದ್ರೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಸಾಥ್ ನೀಡಿದ್ರೆ ಏನು ಬೇಕಾದ್ರೂ ಆಗಬಹುದು.