ದುಬೈನಲ್ಲಿ ಟೀಮ್ ಇಂಡಿಯಾ ಅಂದುಕೊಂಡಿದ್ದು ಎಲ್ಲವೂ ನಡೆಯಿತು. ಟಾಸ್ ಗೆದ್ದಿದ್ದೂ ಆಯತು. ಫಾಸ್ಟ್ ಬೌಲಿಂಗ್ ಜೊತೆಗೆ ಸ್ಪಿನ್ನರ್ಗಳು ಮಿಂಚಿದ್ದೂ ಆಯಿತು. ಎದುರಾಳಿಯನ್ನು ಬೇಗನೆ ಕಟ್ಟಿಹಾಕಿ ದೊಡ್ಡ ಗೆಲುವನ್ನೂ ಪಡೆದಿದ್ದು ಆಯಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಜನ್ಮದಿನಕ್ಕೆ ಗೆಲುವಿನ ಗಿಫ್ಟ್ ಕೂಡ ಸಿಕ್ಕಿತು.
ಟಾಸ್ ಗೆದ್ದ ಟೀಮ್ ಇಂಡಿಯಾ ಸ್ಕಾಟ್ಲೆಂಡ್ ಅನ್ನು ಬ್ಯಾಟಿಂಗ್ಗೆ ಇಳಿಸಿತು. ಕೈಲ್ ಕೊಯೆಟ್ಜರ್ 1 ರನ್ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಜಾರ್ಜ್ ಮುನ್ಸೆ ಬಿರುಸಿನ 24 ರನ್ಗಳಿಸಿ ಡೇಂಜರಸ್ ಆಗಿ ಕಂಡರು. ಆದರೆ ಶಮಿ ಮುನ್ಸೆ ಆಟಕ್ಕೆ ಮಂಗಳ ಹಾಡಿದರು. ದಾಳಿಗಳಿದ ಜಡೇಜಾ ಬೆರಿಂಗ್ಟನ್ ಮತ್ತು ಮ್ಯಾಥ್ಯೂ ಕ್ರಾಸ್ ವಿಕೆಟ್ ಅನ್ನು ಒಂದೇ ಓವರ್ನಲ್ಲಿ ಪಡೆದರು.
ಕಾಲ್ಯೂಮ್ ಮೆಕ್ಲಾಯ್ಡ್ ಮತ್ತು ಮೈಕಲ್ ಲಿಸ್ಕ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಲಿಸ್ಕ್ 21 ರನ್ಗಳಿಸಿ ಜಡೇಜಾಗೆ 3ನೇ ಬಲಿಯಾದರು. ಅಶ್ವಿನ್ ಗ್ರೀವ್ಸ್ ಆಟಕ್ಕೆ ಕಡಿವಾಣ ಹಾಕಿದರು. ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ ಸ್ಕಾಟ್ಲೆಂಡ್ನ ಉಳಿದ ಬ್ಯಾಟ್ಸ್ಮನ್ಗಳನ್ನು ಬೇಗನೆ ಪವೆಲಿಯನ್ಗೆ ಕಳುಹಿಸಿದರು. ಸ್ಕಾಟ್ಲೆಂಡ್ 17.4 ಓವರುಗಳಲ್ಲಿ 85 ರನ್ಗಳಿಗೆ ಆಲೌಟ್ ಆಯಿತು. ಜಡೇಜಾ ಮತ್ತು ಶಮಿ ತಲಾ 3 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಪಡೆದರು.
ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾಕ್ಕೆ ಸ್ಪೋಟಕ ಆರಂಭ ಸಿಕ್ಕಿತು. ರಾಹುಲ್ ಮತ್ತು ರೋಹಿತ್ ಸ್ಕಾಟ್ಲೆಂಡ್ ಬೌಲರ್ಗಳ ಬೆಂಡೆತ್ತಿದ್ರು. ಕೇವಲ 3.5 ಓವರುಗಳಲ್ಲೇ ಟೀಮ್ ಇಂಡಿಯಾದ ಸ್ಕೋರ್ 50 ರನ್ಗಳ ಗಡಿ ದಾಟಿತ್ತು. ಮೊದಲ 5 ಓವರುಗಳಲ್ಲಿ ಟೀಮ್ ಇಂಡಿಯಾ 70 ರನ್ಗಳಿಸಿತ್ತು. ರೋಹಿತ್ ಕೇವಲ 16 ಎಸೆತಗಳಲ್ಲಿ 30 ರನ್ಗಳಿಸಿ ಔಟಾದರು.
ಇನ್ನೊಂದೆಡೆ ಕೆ.ಎಲ್.ರಾಹುಲ್ ಅಬ್ಬರಿಸಿ ಬೊಬ್ಬಿರಿದರು. ಕೇವಲ 18 ಎಸೆತಗಳಲ್ಲಿ ಅರ್ಧಶತಕದ ಗಡಿ ಕೂಡ ದಾಟಿದರು. 19 ಎಸೆತಗಳಲ್ಲಿ 6 ಫೋರ್ ಮತ್ತು 3 ಸಿಕ್ಸರ್ ನೆರವಿನಿಂದ 50 ರನ್ಗಳಿಸಿ ರಾಹುಲ್ ಔಟಾದರು.
ಟೀಮ್ ಇಂಡಿಯಾ 6.2 ಓವರುಗಳಲ್ಲಿ ಗುರಿ ತಲುಪಿ ಭರ್ಜರಿ ಜಯ ದಾಖಲಿಸಿತು. ಅಷ್ಟೇ ಅಲ್ಲ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ಗಿಂತಲೂ ಹೆಚ್ಚು ಪಡೆದಿದೆ. ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ಅಫ್ಘಾನಿಸ್ತಾನದ ಮೇಲೆ ಸೋತರೆ, ಟೀಮ್ ಇಂಡಿಯಾ ನಮಿಬಿಯಾ ವಿರುದ್ಧ ಗೆದ್ದರೆ ಮಾತ್ರ ಸೆಮಿಫೈನಲ್ ತಲುಪಲಿದೆ.