ಹೊಸ ತಂಡ, ಹೊಸ ಆತ್ಮವಿಶ್ವಾಸ, ಹೊಸ ನಾಯಕನ ಸಾರಥ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್, ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಫೈಟ್‌ನಲ್ಲಿ ಗುಜರಾತ್ ಟೈಟನ್ಸ್ ಶ್ರೇಷ್ಠ ಪ್ರದರ್ಶನ ನೀಡಿತು. ಸಂಘಟಿತ ಪ್ರದರ್ಶನದ ಮೂಲಕ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್, ಆ ಮೂಲಕ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರಿತು.

ರಾಜಸ್ಥಾನ್ ಅಲ್ಪಮೊತ್ತ:
ಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್(22) ಹಾಗೂ ಜಾಸ್ ಬಟ್ಲರ್(39) ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ನಂತರ ಬಂದ ಸಂಜೂ ಸ್ಯಾಮ್ಸನ್(14), ಪಡಿಕ್ಕಲ್(2), ಹೆಟ್ಮಾಯೆರ್(11), ಅಶ್ವಿನ್(6), ಪರಾಗ್(15), ಬೋಲ್ಟ್(11), ಮೆಕಾಯ್(8) ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲರಾದರು. ಪರಿಣಾಮ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 130 ರನ್‌ಗಳಿಸಿತು. ಗುಜರಾತ್ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ(3/17), ಸಾಯಿ ಕಿಶೋರ್ (2/20) ರಾಜಸ್ಥಾನ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರೆ. ಶಮಿ, ಯಶ್ ದಯಾಳ್ ಹಾಗೂ ರಶೀದ್ ತಲಾ 1 ವಿಕೆಟ್ ಪಡೆದರು.

ಗುಜರಾತ್ ಭರ್ಜರಿ ಆಟ:
ರಾಜಸ್ಥಾನ್ ರಾಯಲ್ಸ್ ನೀಡಿದ 131 ರನ್‌ಗಳ ಸಾಧಾರಣ ಟಾರ್ಗೆಟ್ ಬೆನ್ನತಿದ ಗುಜರಾತ್ ಟೈಟನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಬಂದ ವೃದ್ಧಿಮಾನ್ ಸಾಹ(5) ಹಾಗೂ 1ನೇ ಕ್ರಮಾಂಕದಲ್ಲಿ ಬಂದ ಮ್ಯಾಥ್ಯೂ ವೇಡ್(8) ಬಹುಬೇಗನೆ ನಿರ್ಗಮಿಸಿದರು. ಆದರೆ ಜವಾಬ್ದಾರಿಯ ಆಟವಾಡಿದ ಶುಭ್ಮನ್ ಗಿಲ್(45*) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(34) ತಂಡದ ಗೆಲುವಿನ ದಾರಿ ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಡೇವಿಡ್ ಮಿಲ್ಲರ್(32*) ಬಿರುಸಿನ ಆಟವಾಡಿ ತಂಡವನ್ನ ಗೆಲುವಿನ ದಡಸೇರಿಸಿದರು. ಪರಿಣಾಮ ಗುಜರಾತ್ ಟೈಟನ್ಸ್ 18.1 ಓವರ್‌ನಲ್ಲಿ 3 ವಿಕೆಟ್‌ಗೆ 133 ರನ್‌ಗಳಿಸಿ ಗೆದ್ದುಬೀಗಿತು. ರಾಜಸ್ಥಾನ್ ಪರ ಬೋಲ್ಟ್, ಪ್ರಸಿದ್ಧ್ ಹಾಗೂ ಚಹಲ್ ತಲಾ 1 ವಿಕೆಟ್ ಪಡೆದರು.

ಗುಜರಾತ್ ಹೊಸ ಚಾಂಪಿಯನ್ಸ್:
2022ರ ಐಪಿಎಲ್ ಆವೃತ್ತಿಗೆ ಹೊಸ ತಂಡವಾಗಿ ಬಂದ ಗುಜರಾತ್ ಟೈಟನ್ಸ್ ಸೀಸನ್ ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 10 ಗೆಲುವು, 4 ಸೋಲಿನಿಂದ 20 ಪಾಯಿಂಟ್ಸ್ ಪಡೆದಿದ್ದ ಗುಜರಾತ್, ಸೀಸನ್‌ನ ಮೊದಲ ತಂಡವಾಗಿ ಪ್ಲೇ-ಆಫ್ ಹಂತಕ್ಕೆ ಪ್ರವೇಶ ಪಡೆಯಿತು. ನಂತರ ಕ್ವಾಲಿಫೈಯರ್-1ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ನೇರವಾಗಿ ಫೈನಲ್‌ಗೆ ಎಂಟ್ರಿಕೊಟ್ಟಿತು. ಫೈನಲ್‌ನಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ ಗುಜರಾತ್ ಟೈಟನ್ಸ್, ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿದೆ.