ಕಳೆದ ಎರಡು ತಿಂಗಳ ಕಾಲ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಅದ್ದೂರಿ ತೆರೆಬಿದ್ದಿದೆ. ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ 2022ರ ಐಪಿಎಲ್ ಚಾಂಪಿಯನ್ ಎನಿಸಿದರೆ. ಸೀಸನ್ ಉದ್ದಕ್ಕೂ ಮಿಂಚಿದ ಹಲವು ಆಟಗಾರರು ವಿವಿಧ ಪ್ರಶಸ್ತಿಗಳನ್ನ ಪಡೆದು ಮಿಂಚಿದರು.

ಬಟ್ಲರ್ಗೆ ʼಆರೆಂಜ್ ಕ್ಯಾಪ್ʼ:
2022ರ ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ ಜಾಸ್ ಬಟ್ಲರ್, 15ನೇ ಆವೃತ್ತಿಯ “ಆರೆಂಜ್ ಕ್ಯಾಪ್” ತಮ್ಮದಾಗಿಸಿಕೊಂಡರು. ಸೀಸನ್ನಲ್ಲಿ ಆಡಿದ 17 ಪಂದ್ಯಗಳಿಂದ 57.53ರ ಸರಾಸರಿ ಹಾಗೂ 149.05ರ ಸ್ಟ್ರೈಕ್ ರೇಟ್ನೊಂದಿಗೆ 863 ರನ್ಗಳಿಸಿ ಮಿಂಚಿದರು. ಇವರ ಈ ಪ್ರದರ್ಶನದಲ್ಲಿ 4 ಶತಕ ಹಾಗೂ 4 ಅರ್ಧಶತಕ ಒಳಗೊಂಡಿದೆ. ಆರೆಂಜ್ ಕ್ಯಾಪ್ ಜೊತೆಗೆ ಪ್ಲೇಯರ್ ಆಫ್ ದಿ ಟೋರ್ನಮೆಂಟ್(ಡ್ರೀಮ್ ಇಲೆವೆನ್), ಪ್ಲೇಯರ್ ಆಫ್ ದಿ ಟೋರ್ನಮೆಂಟ್(ಅಪ್ಸ್ಟಾಕ್), ಅತ್ಯಧಿಕ ಸಿಕ್ಸರ್, ಅತ್ಯಧಿಕ ಬೌಂಡರಿ ಬಾರಿಸಿದ ಪ್ರಶಸ್ತಿ ಜೊತೆಗೆ ಪವರ್ ಪ್ಲೇಯರ್ ಆಫ್ ದಿ ಟೋರ್ನಮೆಂಟ್(ಕ್ರೆಡ್) ಪ್ರಶಸ್ತಿಗಳನ್ನ ಪಡೆದರು.

ಚಹಲ್ಗೆ ʼಪರ್ಪಲ್ ಕ್ಯಾಪ್ʼ:
ಬ್ಯಾಟ್ಸ್ಮನ್ಗಳ ಅಬ್ಬರವೇ ಹೆಚ್ಚಾಗಿರುವ ಐಪಿಎಲ್ನಲ್ಲಿ ತಮ್ಮ ಚಾಣಾಕ್ಷ ಬೌಲಿಂಗ್ನಿಂದ ಮೋಡಿ ಮಾಡಿದ ಯುಜುವೇಂದ್ರ ಚಹಲ್, 15ನೇ ಆವೃತ್ತಿಯ “ಪರ್ಪಲ್ ಕ್ಯಾಪ್” ಮುಡಿಗೇರಿಸಿಕೊಂಡರು. ಇಡೀ ಸೀಸನ್ನಲ್ಲಿ ಅದ್ಭುತ ಸ್ಪಿನ್ ಮೋಡಿ ಮಾಡಿದ ಚಹಲ್, 17 ಪಂದ್ಯಗಳಲ್ಲಿ 19.51ರ ಸರಾಸರಿ ಮತ್ತು 7.75ರ ಎಕಾನಮಿಯೊಂದಿಗೆ 27 ವಿಕೆಟ್ ಪಡೆದು ಮಿಂಚಿದರು, 5/40 ಚಹಲ್ ಅವರ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ.

ಉಮ್ರಾನ್ ʼಎಮರ್ಜಿಂಗ್ ಪ್ಲೇಯರ್ʼ:
ತಮ್ಮ ವೇಗದ ಬೌಲಿಂಗ್ನಿಂದ ಗಮನ ಸೆಳೆದ ಉಮ್ರಾನ್ ಮಲ್ಲಿಕ್, 2022ರ ಐಪಿಎಲ್ ಟೂರ್ನಿಯ “ಎಮರ್ಜಿಂಗ್ ಪ್ಲೇಯರ್” ಪ್ರಶಸ್ತಿ ಪಡೆದಿದ್ದಾರೆ. ಸನ್ರೈಸರ್ಸ್ ಹೈದ್ರಾಬಾದ್ ತಂಡದ ವೇಗದ ಬೌಲಿಂಗ್ ಅಸ್ತ್ರವಾಗಿದ್ದ ಉಮ್ರಾನ್ ಮಲ್ಲಿಕ್, 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದು, 20.18ರ ಬೌಲಿಂಗ್ ಸರಾಸರಿ ಹೊಂದಿದ್ದಾರೆ. 5/25 ವಿಕೆಟ್ಗಳು ಉಮ್ರಾನ್ ಮಲ್ಲಿಕ್ ಅವರ ಬೆಸ್ಟ್ ಬೌಲಿಂಗ್ ಪ್ರದರ್ಶನವಾಗಿದೆ.

ಡಿಕೆ ʼಸೂಪರ್ ಸ್ಟ್ರೈಕರ್ʼ
15ನೇ ಆವೃತ್ತಿಯ ಐಪಿಎಲ್ನಲ್ಲಿ ಸ್ಪೋಟಕ ಬ್ಯಾಟಿಂಗ್ನಿಂದ ಎಲ್ಲರ ಹುಬ್ಬೇರುವಂತೆ ಮಾಡಿದ್ದ ದಿನೇಶ್ ಕಾರ್ತಿಕ್, ಈ ಸೀಸನ್ನ ʼಸೂಪರ್ ಸ್ಟ್ರೈಕರ್ʼ ಪ್ರಶಸ್ತಿ ಪಡೆದರು. ಆರ್ಸಿಬಿ ತಂಡದ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್, ಸೀಸನ್ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು.

ಲೆವಿಸ್ಗೆ ʼಕ್ಯಾಚ್ ಆಫ್ ದಿ ಸೀಸನ್ʼ
2022ರ ಐಪಿಎಲ್ನಲ್ಲಿ ಹಲವು ಅದ್ಭುತ ಕ್ಯಾಚ್ಗಳನ್ನು ನೋಡಿದರು, ಕೆಕೆಆರ್-ಎಲ್ಎಸ್ಜಿ ನಡುವಿನ ಪಂದ್ಯದಲ್ಲಿ ಎವಿನ್ ಲೆವಿಸ್ ಹಿಡಿದ ಅದ್ಭುತ ಕ್ಯಾಚ್, 15ನೇ ಆವೃತ್ತಿಯ ʼಕ್ಯಾಚ್ ಆಫ್ ದಿ ಸೀಸನ್ʼ ಎನಿಸಿತು.
RR & GT ತಂಡಕ್ಕೆ ಫೇರ್-ಪ್ಲೇ ಅವಾರ್ಡ್:
ಸೀಸನ್ ಉದ್ದಕ್ಕೂ ಸ್ಪರ್ಧಾತ್ಮಕವಾಗಿ ಕ್ರೀಡಾ ಸ್ಪೂರ್ತಿ ಮೆರೆದ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು 2022ರ ಐಪಿಎಲ್ನ ಫೇರ್-ಪ್ಲೇ ಪ್ರಶಸ್ತಿ ಹಂಚಿಕೊಂಡವು.