ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿರೋ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಜೊತೆಗೆ ಹಲವು ಆಟಗಾರರ ನಡುವಿನ ಸ್ನೇಹದ ಸೇತುವೆಯಾಗಿಯೂ ನಿಂತಿದೆ. ಹೀಗೆ ಐಪಿಎಲ್ನಲ್ಲಿ ಫ್ರೆಂಡ್ಶಿಪ್ ಮೂಲಕ ಗಮನ ಸೆಳೆದವರು ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಹಾಗೂ ನ್ಯೂಜಿ಼ಲೆಂಡ್ ತಂಡದ ಕೂಲ್ ಕ್ಯಾಪ್ಟನ್ ಕೇನ್ ವಿಲಿಯಂಸನ್ ಜೋಡಿ.
ಐಪಿಎಲ್ ಅಂಗಳದಲ್ಲಿ ಮೋಡಿ ಮಾಡಿದ್ದ ಈ ಇಬ್ಬರು ಸ್ನೇಹಿತರು ಇದೀಗ ದೂರಾಗಿದ್ದಾರೆ. ಕಳೆದ 7 ವರ್ಷಗಳಿಂದ ಸನ್ರೈಸರ್ಸ್ ಹೈದ್ರಾಬಾದ್ ಪರ ಆಡುತ್ತಿದ್ದ ಡೇವಿಡ್ ವಾರ್ನರ್ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಕೇನ್ ವಿಲಿಯಂಸನ್ ಜೊತೆಗೆ ಆಡುವ ಅವಕಾಶ ಮಿಸ್ ಮಾಡಿಕೊಂಡಿರುವ ಡೇವಿಡ್ ವಾರ್ನರ್, ಆಪ್ತ ಸ್ನೇಹಿತನಿಗಾಗಿ ಪ್ರೀತಿಯ ಮೆಸೇಜ್ವೊಂದನ್ನ ಕಳುಹಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೇನ್ ವಿಲಿಯಂಸನ್ ಜೊತೆಗೆ ಕುಳಿತಿರುವ ಫೋಟೋ ಹಾಕಿರುವ ವಾರ್ನರ್, “ವಿಲಿಯಂಸನ್ ಜೊತೆಗಿನ ಬ್ರೇಕ್ ಫಾಸ್ಟ್ ಸಮಯವನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ ಮತ್ತು ನಿಮ್ಮೊಂದಿಗೆ ಕ್ರಿಕೆಟ್ ಆಡುವುದನ್ನು ಸಹ ಮಿಸ್ ಮಾಡಿಕೊಳ್ಳುತ್ತೇನೆ ಬ್ರದರ್” ಎಂದು ಬರೆಯುವ ಮೂಲಕ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ನಿಂದಲೇ ಮಿಂಚಿದ್ದ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಡೇವಿಡ್ ವಾರ್ನರ್, 2021ರ ಐಪಿಎಲ್ನಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ಹೀಗಾಗಿ ಮೊದಲಿಗೆ SRH ತಂಡದಿಂದ ಕೈಬಿಡಲ್ಪಟ್ಟ ವಾರ್ನರ್, ನಂತರ ತಂಡದ ಮ್ಯಾನೇಜ್ಮೆಂಟ್ ಜೊತೆಗಿನ ಮನಸ್ಥಾಪದಿಂದ ಟೂರ್ನಿಯಿಂದಲೇ ಹೊರಗುಳಿದಿದ್ದರು.
ಹೀಗಾಗಿ 2016ರಲ್ಲಿ SRH ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟಿದ್ದ ಡೇವಿಡ್ ವಾರ್ನರ್ ಅವರನ್ನ ಹೈದ್ರಾಬಾದ್ ತಂಡ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ತಂಡದಲ್ಲಿ ಉಳಿಸಿಕೊಳ್ಳಲಿಲ್ಲ. ಪರಿಣಾಮ ಆಸೀಸ್ ತಂಡದ ಸ್ಟಾರ್ ಓಪನಿಂಗ್ ಬ್ಯಾಟ್ಸಮನ್ ವಾರ್ನರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಹಾಗೂ ಮುಂಬೈ ಫ್ರಾಂಚೈಸಿಗಳ ಪೈಪೋಟಿ ನಡುವೆಯೂ 6.2 ಕೋಟಿ ರೂ. ನೀಡಿ ಖರೀದಿಸಿತು.