ಸ್ಟಾರ್ ಆಟಗಾರರಾದ ಮಣಿಂದರ್ ಸಿಂಗ್ ಮತ್ತು ಆಲ್ ರೌಂಡರ್ ಮೊಹಮ್ಮದ್ ನಬಿಬಕ್ಷ್ ಇವರ ಭರ್ಜರಿ ಆಟದ ಬಲದಿಂದ ಬೆಂಗಾಲ್ ವಾರಿಯರ್ಸ್ 52-21 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿದೆ.
ಈ ಗೆಲುವಿನ ಮೂಲಕ ಬೆಂಗಾಲ್ ಪ್ರಸಕ್ತ ಋತುವಿನಲ್ಲಿ ಆಡಿದ 21 ಪಂದ್ಯಗಳಲ್ಲಿ 8 ಜಯ, 10 ಸೋಲು, 3 ಡ್ರಾ ಸಾಧಿಸಿದ್ದು 52 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ. ಇನ್ನು ತಮಿಳು ತಲೈವಾಸ್ ಟೂರ್ನಿಯಲ್ಲಿ 10ನೇ ಸೋಲಿಗೆ ಶರಣಾಗಿದೆ.
ಮೊದಲಾವಧಿಯ 20ನೇ ನಿಮಿದಲ್ಲಿ ಬೆಂಗಾಲ್ ವಾರಿಯರ್ಸ್ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು. ಈ ವೇಳೆ ವಾರಿಯರ್ಸ್ 28-10 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಾಳಿಯಲ್ಲಿ 17 ಹಾಗೂ ಟ್ಯಾಕಲ್ ನಲ್ಲಿ 7 ಅಂಕ ಸೇರಿಸಿತು. ಇನ್ನು ತಮಿಳು ತಲೈವಾಸ್ ತಂಡವನ್ನು ವಾರಿಯರ್ಸ್ ಎರಡು ಬಾರಿ ಆಲೌಟ್ ಮಾಡಿ ಬೋನಸ್ ಅಂಕವನ್ನು ಗಳಿಸಿತು.
ಎರಡನೇ ಅವಧಿಯಲ್ಲಿ ವಾರಿಯರ್ಸ್ 24-11 ರಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಈ ಅವಧಿಯಲ್ಲಿ ದಾಳಿಯ ಮೂಲಕವೇ ವಿಜೇತ ತಂಡ ಅರ್ಧಕ್ಕೂ ಹೆಚ್ಚು ಅಂಕ ಕಲೆ ಹಾಕಿತು. ಉಳಿದಂತೆ ಆರು ಅಂಕವನ್ನು ಟ್ಯಾಕಲ್ ನಲ್ಲಿ, ಮತ್ತೆ ಎರಡನೇ ಅವಧಿಯಲ್ಲಿ ಮತ್ತೊಮ್ಮೆ ಎರಡು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿತು.
ವಾರಿಯರ್ಸ್ ತಂಡದ ಸ್ಟಾರ್ ಆಟಗಾರ ಮಣಿಂದರ್ ಸಿಂಗ್ ಅಬ್ಬರದ ಆಟ ಪ್ರದರ್ಶಿಸಿದರು. ಇವರು 14 ಅಂಕ ಕಲೆ ಹಾಕಿದರೆ, ಆಲ್ ರೌಂಡರ್ ಮೊಹಮ್ಮದ್ ನಬಿಬಕ್ಷ್ 13 ಅಂಕ ಸೇರಿಸಿದರು.