ಪ್ರಸಕ್ತ ಐಪಿಎಲ್ನಲ್ಲಿ ವಿದೇಶಿ ಆಟಗಾರರ ಕೊರತೆ ಎದುರಿಸುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್, ಕಡೆಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ತಂಡದ ಪ್ರಮುಖ ವಿದೇಶಿ ಆಟಗಾರರಾದ ಅನ್ರಿಕ್ ನೊಕಿಯಾ ಹಾಗೂ ಡೇವಿಡ್ ವಾರ್ನರ್ ಮುಂದಿನ ಪಂದ್ಯದಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದಾರೆ.
ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದ್ದ ಡೆಲ್ಲಿ ಕ್ಯಾಪಿಟಲಸ್, ತನ್ನ 2ನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಹೀಗಾಗಿ ಸಮಬಲದ ಪ್ರದರ್ಶನ ಕಂಡಿರುವ ಡೆಲ್ಲಿ, ಏಪ್ರಿಲ್ 7ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಹಣಾಹಣಿ ನಡೆಸಲಿದೆ. ಈ ಪಂದ್ಯಕ್ಕೆ ವೇಗದ ಬೌಲರ್ ಅನ್ರಿಕ್ ನೊಕಿಯಾ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಮುಂದಿನ ಪಂದ್ಯದ ಆಯ್ಕೆಗೆ ಲಭ್ಯರಿರಲಿದ್ದಾರೆ ಎಂದು ಡೆಲ್ಲಿ ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಇವರಿಬ್ಬರ ನಡುವೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್, ಏಪ್ರಿಲ್ 10ರಂದು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ತಂಡಕ್ಕೆ ಸೇರ್ಪಡೆಯಾಗುವ ಬಗ್ಗೆಯೂ ಕೋಚ್ ರಿಕಿ ಪಾಂಟಿಂಗ್ ವಿಶ್ವಾಸ ಹೊಂದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಿಚೆಲ್ ಮಾರ್ಷ್ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದಾರೆ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್ಗಳ ಸರಣಿಗೆ ಡೇವಿಡ್ ವಾರ್ನರ್ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ಏ.6ರವರೆಗೆ ಅವರು ಐಪಿಎಲ್ ಟೂರ್ನಿಗೆ ಲಭ್ಯ ಇರಲಿಲ್ಲ ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
15ನೇ ಆವೃತ್ತಿಯಲ್ಲಿ ಭರ್ಜರಿ ಆರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿತ್ತು. ಆದರೆ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೇಸಿಂಗ್ನಲ್ಲಿ ಮುಗ್ಗರಿಸಿದ್ದ ಡೆಲ್ಲಿ, ಕಳೆದ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿತ್ತು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯುವ ಮೂರನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.