ಆರಂಭಿಕ ಆಘಾತದ ನಡುವೆಯೂ ಲಿಯಮ್ ಲಿವಿಂಗ್ಸ್ಟೋನ್(60) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕಮ್ಬ್ಯಾಕ್ ಮಾಡಿದ ಪಂಜಾಬ್ ಕಿಂಗ್ಸ್, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 181 ರನ್ಗಳ ಟಾರ್ಗೆಟ್ ನೀಡಿದೆ.
ಇಲ್ಲಿನ ಬ್ರೆಬೌರ್ನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, 20 ಓವರ್ಗಳಲ್ಲಿ 8 ವಿಕೆಟ್ಗೆ 180 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಪಂಜಾಬ್ ಪರ ಲಿವಿಂಗ್ಸ್ಟೋನ್(60) ಮತ್ತು ಶಿಖರ್ ಧವನ್(33) ತಂಡಕ್ಕೆ ಆಸರೆಯಾದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್(4) ಹಾಗೂ ಬನುಕಾ ರಾಜಪಕ್ಸ(9) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಆದರೆ ನಂತರ ಜೊತೆಯಾದ ಧವನ್ ಹಾಗೂ ಲಿವಿಂಗ್ಸ್ಟೋನ್, ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯ ಆಟವಾಡಿದ ಈ ಜೋಡಿ 3ನೇ ವಿಕೆಟ್ಗೆ 95 ರನ್ಗಳ ಅದ್ಭುತ ಜೊತೆಯಾಟದಿಂದ ತಂಡಕ್ಕೆ ಆಸರೆಯಾದರು.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಲಿಯಾಮ್ ಲಿವಿಂಗ್ಸ್ಟೋನ್ 60 ರನ್ (32 ಎಸೆತ, 5 ಬೌಂಡರಿ, 5 ಸಿಕ್ಸ್) ಮೂಲಕ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಶಿಖರ್ ಧವನ್(33) ಹಾಗೂ ಚೊಚ್ಚಲ ಐಪಿಎಲ್ ಪಂದ್ಯವಾಡಿದ ಜಿತೇಶ್ ಶರ್ಮ(26) ರನ್ಗಳ ಉಪಯುಕ್ತ ಕಾಣಿಕೆ ನೀಡಿ, ತಂಡಕ್ಕೆ ಆಸರೆಯಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶಾರೂಕ್ ಖಾನ್(6) ಹಾಗೂ ಒಡಿಯನ್ ಸ್ಮಿತ್(3) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಒಂದು ಹಂತದಲ್ಲಿ 200 ರನ್ ಕಲೆಹಾಕವ ಅವಕಾಶ ಹೊಂದಿದ್ದ ಪಂಜಾಬ್ ಕಿಂಗ್ಸ್, ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಮೇಲುಗೈ ಸಾಧಿಸಿದ ಚೆನ್ನೈ ಬೌಲರ್ಗಳು, ಪಂಜಾಬ್ ತಂಡದ ರನ್ಗಳಿಕೆ ಓಟಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ ರಾಹುಲ್ ಚಹರ್(12), ರಬಾಡ(12*) ಅವರುಗಳ ನೆರವಿನಿಂದ ಪಂಜಾಬ್ 180/8 ರನ್ಗಳಿಸಿತು. ಚೆನ್ನೈ ಪರ ಕ್ರಿಸ್ ಜೋರ್ಡಾನ್ ಮತ್ತು ಪ್ರಿಟೋರಿಯಸ್ ತಲಾ 2 ವಿಕೆಟ್ ಪಡೆದರೆ. ಡ್ವೇನ್ ಬ್ರಾವೋ, ಮುಖೇಶ್ ಚೌಧರಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.