ಭರವಸೆಯ ಆಟಗಾರ ಅಭಿಷೇಕ್ ಸಿಂಗ್ ಅವರ ಭರ್ಜರಿ ಪ್ರದರ್ಶನ ನೀಡಿದ ಪ್ರಸಕ್ತ ಸಾಲಿನ ಪ್ರೋ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಯು-ಮುಂಬಾ ತಂಡ, ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಬೆಂಗಳೂರಿಲ್ಲಿ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬಾ 46-30 ರಿಂದ ಬೆಂಗಳೂರು ತಂಡವನ್ನು ಮಣಿಸಿತು. ಮುಂಬಾ ತಂಡದ ಗೆಲುವಿನಲ್ಲಿ ಅಭಿಷೇಕ್ ಸಿಂಗ್ ಮಿಂಚಿದರು. ಇವರು 27 ರೈಡ್ ಗಳಲ್ಲಿ 15 ಟಚ್ ಅಂಕ ಹಾಗೂ 4 ಬೋನಸ್ ಅಂಕ ಕಲೆ ಹಾಕಿ ಅಬ್ಬರಿಸಿದರು. ಮುಂಬಾ ಪರ ರಕ್ಷಣಾ ಆಟಗಾರ ಹರೀಂದರ್ ಕುಮಾರ್ ನಾಲ್ಕು ಅಂಕ ಕಬಳಿಸಿದರು. ಬೆಂಗಳೂರು ತಂಡದ ಪರ ದಾಳಿಕೋರ ಚಂದ್ರನ್ ರಂಜಿತ್ 13 ಅಂಕ ಸೇರಿಸಿದರೆ, ರಕ್ಷಣಾ ಆಟಗಾರ ಮಯೂರ್ ಮೂರು ಅಂಕ ತಮ್ಮದಾಗಿಸಿಕೊಂಡರು.
ಮೊದಾಲವಧಿಯ ಆರಂಭದಲ್ಲಿ ಬೆಂಗಳೂರು ತಂಡ ಸಮಯೋಚಿತ ಆಟದ ಪ್ರದರ್ಶನ ನೀಡಿತು. ಪವನ್ ಆರಂಭದಲ್ಲಿ ಅಂಕ ಕಲೆ ಹಾಕಿದರು. ಈ ಅವಧಿಯಲ್ಲಿ ಮುಂಬಾ ಭರ್ಜರಿ ಆಟದ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿತು. ಅಲ್ಲದೆ 24-17 ರಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಅಂಕಗಳನ್ನು ಕಲೆ ಹಾಕಿ ಎದುರಾಳಿ ತಂಡಕ್ಕೆ ಶಾಕ್ ನೀಡಬೇಕು ಎಂಬ ಬುಲ್ಸ್ ತಂಡದ ಆಸೆ ಫಲಿಸಲಿಲ್ಲ. ಪರಿಣಾಮ ಮುಂಬಾ ಹಂತ ಹಂತವಾಗಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿತು. ಅಲ್ಲದೆ ಅಂಕಗಳ ಮುನ್ನಡೆದಯನ್ನು ಹೆಚ್ಚಿಸಿಕೊಂಡಿತು.
ಮುಂಬಾ ಪರ ಆಶೀಶ್ 3, ಹರೀಂದ್ರ 4, ವಿ ಅಜಿತ್ 6 ಅಂಕಗಳನ್ನು ಕಲೆ ಹಾಕಿದರು.
ಬೆಂಗಳೂರು ತಂಡದ ಪರ ನಾಯಕ ಪವನ್ ಶೇರಾವತ್ ಸಹ ಸೋಲಿನಲ್ಲಿ ಮಿಂಚಿದರು. ಇವರು 27 ಬಾರಿ ದಾಳಿ ನಡೆಸಿ 12 ಅಂಕಗಳನ್ನು ಕಲೆ ಹಾಕಿದರು.