ಆರಂಭಿಕ ಆಘಾತದ ನಡುವೆಯೂ ಬಲಿಷ್ಠ ಕಮ್ಬ್ಯಾಕ್ ಮಾಡಿದ ವೆಸ್ಟ್ ಇಂಡೀಸ್, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಆಂಟಿಗುವಾದಲ್ಲಿ ನಡೆದ ಪಂದ್ಯದ 4ನೇ ದಿನವಾದ ಭಾನುವಾರ 49/3 ರನ್ಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್, 22 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್ಗಳಿಸುವ ಮೂಲಕ 7 ವಿಕೆಟ್ಗಳ ಗೆಲುವು ಸಾಧಿಸಿತು. ವಿಂಡೀಸ್ ಪರ ಕ್ಯಾಂಪ್ಬೆಲ್(58*) ಹಾಗೂ ಬ್ಲ್ಯಾಕ್ವುಡ್(26*) ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಪಂದ್ಯದಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ಬ್ಯಾಟಿಂಗ್, ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿತು. ಪ್ರವಾಸಿ ತಂಡವನ್ನ ಮೊದಲ ಇನ್ನಿಂಗ್ಸ್ನಲ್ಲಿ 103 ರನ್ಗಳಿಗೆ ಕಟ್ಟಿಹಾಕಿದ ಕೆರೆಬಿಯನ್ನರು, ಮೊದಲ ಇನ್ನಿಂಗ್ಸ್ನಲ್ಲಿ 265 ರನ್ಗಳಿಸುವ ಮೂಲಕ 162 ರನ್ಗಳ ಮುನ್ನಡೆ ಪಡೆದಿತ್ತು. ಇದಕ್ಕೆ ಪ್ರತಿಯಾಗಿ ತನ್ನ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ನಾಯಕ ಶಕೀಬ್-ಅಲ್-ಹಸನ್(63) ಹಾಗೂ ನರುಲ್ ಹಸನ್(64) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 245 ರನ್ಗಳಿಸಿ, ಎದುರಾಳಿ ತಂಡಕ್ಕೆ 88 ರನ್ಗಳ ಗುರಿ ನೀಡಲು ಶಕ್ತವಾಗಿತ್ತು.
ಈ ಟಾರ್ಗೆಟ್ ಬೆನ್ನತ್ತಿದ ವೆಸ್ಟ್ ಇಂಡೀಸ್ 2ನೇ ಇನ್ನಿಂಗ್ಸ್ನ ಆರಂಭದಲ್ಲಿ ಕೇವಲ 9 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಜಾನ್ ಕ್ಯಾಂಪ್ಬೆಲ್(58*) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರಿಗೆ ಸಾಥ್ ನೀಡಿದ ಬ್ಲ್ಯಾಕ್ವುಡ್(26*) ವಿಂಡೀಸ್ ತಂಡದ ಗೆಲುವಿಗೆ ಕಾರಣವಾದರು. ಬಾಂಗ್ಲಾ ಪರ ಖಲೀದ್ ಅಹ್ಮದ್ 3 ವಿಕೆಟ್ ಪಡೆದರು. ವಿಂಡೀಸ್ ಪರ ಉಭಯ ಇನ್ನಿಂಗ್ಸ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕೇಮರ್ ರೋಚ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 2 ಪಂದ್ಯ ಜೂ.24ರಿಂದ 28ರವರೆಗೆ ಸೆಂಟ್ ಲೂಸಿಯಾದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ 103 ಮತ್ತು 245
ವೆಸ್ಟ್ ಇಂಡೀಸ್ 265 ಮತ್ತು 88/3