ನವದೆಹಲಿ: ಭಾರತದ ಉದಯೋನ್ಮುಖ ಆಟಗಾರ್ತಿ ಅನಾಹತ್ ಸಿಂಗ್ ಥಾಯ್ಲೆಂಡ್‌ನ ಪಟ್ಟಾಯದಲ್ಲಿ ಭಾನುವಾರ ಮುಕ್ತಾಯಗೊಂಡ ಏಷ್ಯನ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಹದಿನಾಲ್ಕು ವರ್ಷದ ಅನಾಹತ್ ಫೈನಲ್‌ನಲ್ಲಿ ಹಾಂಗ್ ಕಾಂಗ್‌ನ ಕ್ವಾಂಗ್ ಅನಾ ಅವರನ್ನು 3-0 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಕಳೆದುಕೊಳ್ಳದೆ ಅನಾಹತ್ ಫೈನಲ್ ತಲುಪಿದ್ದರು.

ಅವರು ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಅಗ್ರ ಶ್ರೇಯಾಂಕದ ವಿಟ್ನಿ ಇಸಾಬೆಲ್ ವಿಲ್ಸನ್ ಅವರನ್ನು 3-0 ಅಂತರದಿಂದ ಸೋಲಿಸಿದರು. ಅನಾಹತ್ ಇದುವರೆಗೆ 46 ರಾಷ್ಟ್ರೀಯ ಸರ್ಕ್ಯೂಟ್ ಪ್ರಶಸ್ತಿಗಳು, ಎರಡು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳು ಮತ್ತು ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಯಾವುದೇ ವಿಭಾಗದಲ್ಲಿ ಯುಎಸ್ ಜೂನಿಯರ್ ಓಪನ್ ಮತ್ತು ಬ್ರಿಟಿಷ್ ಜೂನಿಯರ್ ಓಪನ್ ಗೆದ್ದ ಏಕೈಕ ಭಾರತೀಯ ಬಾಲಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಫ್ರಾನ್ಸ್‌ನ ನ್ಯಾನ್ಸಿಯಲ್ಲಿ ನಡೆಯಲಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಅನಾಹತ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.