ಅದ್ಭುತ ಬೌಲಿಂಗ್ ದಾಳಿಯ ಮೂಲಕ ಪ್ರವಾಸಿ ಬಾಂಗ್ಲಾದೇಶ ತಂಡವನ್ನ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪಮೊತ್ತಕ್ಕೆ ಕಟ್ಟಿಹಾಕಿರುವ ಅತಿಥೇಯ ವೆಸ್ಟ್ ಇಂಡೀಸ್, ಮೊದಲ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಗುರುವಾರದಿಂದ ಆರಂಭಗೊಂಡ ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ದಾಳಿ ನಡೆಸಿದ ಕೆರೆಬಿಯನ್ ಬೌಲರ್ಗಳು, ಪ್ರವಾಸಿ ಬಾಂಗ್ಲಾದೇಶ ತಂಡವನ್ನ ಕೇವಲ 103 ರನ್ ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್, ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.
ಬಾಂಗ್ಲಾ ಬ್ಯಾಟಿಂಗ್ ವೈಫಲ್ಯ
ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ, ಇನ್ನಿಂಗ್ಸ್ ಆರಂಭದಲ್ಲೇ ಮಹಮದುಲ್ಲಾ ಹೊಸೈನ್(0), ನಜ್ಮುಲ್ ಶಾಂಟೊ(0) ಹಾಗೂ ಮೊಮೀನುಲ್ ಹಕ್(0) ಅವರುಗಳ ವಿಕೆಟ್ ಕಳೆದುಕೊಂಡಿತು. ಕೇವಲ 16 ರನ್ ಗಳಿಗೆ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಜೊತೆಯಾದ ಓಪನರ್ ತಮೀಮ್ ಇಕ್ಬಾಲ್(29) ಹಾಗೂ ಲಿಟನ್ ದಾಸ್(12), ನುರುಲ್ ಹಸನ್(0) ಸಹ ತಂಡಕ್ಕೆ ಚೇತರಿಕೆ ನೀಡುವಲ್ಲಿ ಎಡವಿದರು. ಪರಿಣಾಮ 45 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಬಾಂಗ್ಲಾ ಪಡೆ, ಅಲ್ಪಮೊತ್ತಕ್ಕೆ ಆಲೌಟ್ ಆಗುವ ಆತಂಕಕ್ಕೆ ಸಿಲುಕಿತು.
ಆಸರೆಯಾದ ನಾಯಕ ಶಕೀಬ್
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಶಕೀಬ್-ಅಲ್-ಹಸನ್(51) ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಬ್ಯಾಟ್ಸಮನ್ ಗಳ ವೈಫಲ್ಯದ ನಡುವೆಯೂ ಮಿಂಚಿದ ಶಕೀಬ್, ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನ ನೂರರ ಗಡಿದಾಟಿಸಿದರು. ಆದರೆ ಕೆಳ ಕ್ರಮಾಂಕದಲ್ಲಿ ಬಂದ ಮೆಹದಿ ಹಸನ್(2), ಮುಸ್ತಫಿಜುರ್(0), ಎಬ್ದತ್ ಹೊಸೈನ್(3*) ಹಾಗೂ ಖಲೀಲ್ ಅಹ್ಮದ್(0) ನಾಯಕನಿಗೆ ಸಾಥ್ ನೀಡಲಿಲ್ಲ. ಪರಿಣಾಮ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 103 ರನ್ ಗಳಿಗೆ ಆಲೌಟ್ ಆಯಿತು.
ಮಿಂಚಿದ ಕೆರೆಬಿಯನ್ ಬೌಲರ್ಸ್
ವೆಸ್ಟ್ ಇಂಡೀಸ್ ಪರ ಬೌಲರ್ ಗಳು ಅದ್ಭುತ ಪ್ರದರ್ಶನ ನೀಡಿದರು. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ವಿಂಡೀಸ್ ಪರ ಜೈಡನ್ ಸೇಲ್ಸ್ ಹಾಗೂ ಅಲ್ಜರಿ ಜೋಸೆಫ್ ತಲಾ 3 ವಿಕೆಟ್ ಪಡೆದು ಮಿಂಚಿದರೆ. ಕೋಚ್ ಹಾಗೂ ಮೈರ್ಸ್ ತಲಾ 2 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲು ಮುರಿದರು.
ವಿಂಡೀಸ್ ಉತ್ತಮ ಆರಂಭ
ಪ್ರವಾಸಿ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಕಂಡಿದೆ. ಇನ್ನಿಂಗ್ಸ್ ಆರಂಭಿಸಿದ ನಾಯಕ ಕ್ರೆಗ್ ಬ್ರಾಥ್ವೈಟ್(42*) ಹಾಗೂ ಜಾನ್ ಕಾಂಪ್ಬೆಲ್(24) ಉತ್ತಮ ಆರಂಭ ನೀಡಿದರು. ಆದರೆ ಮೊದಲ ಕ್ರಮಾಂಕದಲ್ಲಿ ಬಂದ ರೈಫರ್(11) ರನ್ ಗಳಿಗೆ ಔಟಾದರೆ. ನಂತರದಲ್ಲಿ ಕಣಕ್ಕಿಳಿದಿರುವ ಬೊನ್ನರ್(12*) ಎಚ್ಚರಿಕೆಯ ಆಟವಾಡಿದರು. ಪರಿಣಾಮ ವೆಸ್ಟ್ ಇಂಡೀಸ್ ಮೊಲದ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿದ್ದು, 8 ರನ್ ಗಳ ಹಿನ್ನಡೆಯೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.