ಕ್ರೆಗ್ ಬ್ರಾಥ್ವೇಟ್(94) ಹಾಗೂ ಬ್ಲಾಕ್‌ವುಡ್(63) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ವೆಸ್ಟ್ ಇಂಡೀಸ್, ಇನ್ನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿದೆ.
ಆಂಟಿಗುವಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನ 103 ರನ್‌ಗಳಿಗೆ ಕಟ್ಟಿಹಾಕಿರುವ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 265 ರನ್ ಕಲೆಹಾಕಿತು. ಇದಕ್ಕುತ್ತರವಾಗಿ 2ನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ, 50 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು, 112 ರನ್‌ಗಳ ಹಿನ್ನಡೆಯೊಂದಿಗೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಬ್ರಾಥ್ವೇಟ್-ಬ್ಲಾಕ್‌ವುಡ್ ಆಸರೆ:
ಮೊದಲ ದಿನದಂತ್ಯಕ್ಕೆ ಕಲೆಹಾಕಿದ್ದ 95/2 ರನ್‌ಗಳಿಂದ ದಿನದಾಟ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ನಾಯಕ ಕ್ರೆಗ್ ಬ್ರಾಥ್ವೇಟ್(94) ಹಾಗೂ ಬ್ಲಾಕ್‌ವುಡ್(63) ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಈ ಇಬ್ಬರು, ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಬ್ರಾಥ್ವೇಟ್ ಕೇವಲ 6 ರನ್‌ಗಳಿಂದ ಶತಕ ವಂಚಿತರಾದರು. ಉಳಿದಂತೆ ಬೊನ್ನರ್(33) ಹಾಗೂ ಮೋಟೆ(23*) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಇವರ ಹೊರತಾಗಿ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಪರಿಣಾಮ ಮೊದಲ ಇನ್ನಿಂಗ್ಸ್‌ನಲ್ಲಿ 265ಕ್ಕೆ ಇನ್ನಿಂಗ್ಸ್ ಮುಗಿಸಿದ ವಿಂಡೀಸ್, 162 ರನ್‌ಗಳ ಅದ್ಭುತ ಮುನ್ನಡೆ ಪಡೆಯಿತು. ಬಾಂಗ್ಲಾ ಪರ ಮೆಹದಿ ಹಸನ್ 4 ವಿಕೆಟ್ ಪಡೆದು ಮಿಂಚಿದರೆ, ಖಲೀದ್ ಅಹ್ಮದ್ ಹಾಗೂ ಹೊಸೈನ್ ತಲಾ 2 ವಿಕೆಟ್ ಪಡೆದುಕೊಂಡರು.
ಸೋಲಿನ ಸುಳಿಯಲ್ಲಿ ಬಾಂಗ್ಲಾ:
ವೆಸ್ಟ್ ಇಂಡೀಸ್ ತಂಡದ 162 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆಗೆ ಪ್ರತಿಯಾಗಿ 2ನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶ, 50 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನಿಂಗ್ಸ್ ಆರಂಭಿಸಿದ ತಮೀಮ್ ಇಕ್ಬಾಲ್(22) ಹಾಗೂ ಮೆಹಿದಿ ಹಸನ್(2) ಬಹುಬೇಗನೆ ವಿಕೆಟ್ ಒಪ್ಪಿಸಿದರು. ಸದ್ಯ 112 ರನ್‌ಗಳ ಹಿನ್ನಡೆಯೊಂದಿಗೆ 2ನೇ ದಿನದಾಟ ಮುಗಿಸಿರುವ ಬಾಂಗ್ಲಾದೇಶ ಸೋಲಿನ ಸುಳಿಯಲ್ಲಿ ಸಿಲುಕಿದೆ. ವಿಂಡೀಸ್ ಪರ ಅಲ್ಜಾರಿ ಜೋಸೆಫ್ 2/14 ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಮೇಲುಗೈ ನೀಡಿದರು.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ:
ಮೊದಲ ಇನ್ನಿಂಗ್ಸ್ – 103
ಎರಡನೇ ಇನ್ನಿಂಗ್ಸ್ – 50/2
ವೆಸ್ಟ್ ಇಂಡೀಸ್:
ಮೊದಲ ಇನ್ನಿಂಗ್ಸ್ – 265