ಟೀಮ್ ಇಂಡಿಯಾ ಮತತು ದಕ್ಷಿಣ ಆಫ್ರಿಕಾ ನಡವಿನ ಟಿ20 ಸರಣಿ ಈಗ ಅಂತಿಮ ಹಂತಕ್ಕೆ ಬಂದಿದೆ. ಇನ್ನೊಂದು ಮ್ಯಾಚ್ ಮಾತ್ರ ಬಾಕಿ ಉಳಿದಿದೆ. ಆದರೆ ಆ ಪಂದ್ಯ ಫೈನಲ್ ಪಂದ್ಯಕ್ಕೆ ಸಮ. ಇಲ್ಲಿ ಗೆದ್ದವರು ಸರಣಿಯ ಚಾಂಪಿಯನ್ ಆಗಲಿದ್ದಾರೆ. ಹೀಗಾಗಿ ಅಂತಿಮ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಅಂದಹಾಗೇ, ಇಂಡೋ-ಆಫ್ರಿಕಾ ಸರಣಿಯ ಫೈನಲ್ ಮ್ಯಾಚ್ ನಡೆಯುವುದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ. ಭಾನುವಾರ ಈ ಪಂದ್ಯ ನಡೆಯುವುದರಿಂದ ಇದು ಸೂಪರ್ ಸಂಡೇಯ ಸಖತ್ ಮ್ಯಾಚ್ ಆಗಿರಲಿದೆ. ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿ ನಡೆಸಲಿವೆ. ಅಭಿಮಾನಿಗಳಿಗೆ ಹಬ್ಬದೂಟ ಸಿಗಲಿದೆ.
ದಕ್ಷಿಣ ಆಫ್ರಿಕಾ ದೆಹಲಿ ಮತ್ತು ಕಟಕ್ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸುಲಭವಾಗಿ ಸರಣಿ ಗೆಲ್ಲುವ ಲೆಕ್ಕಾಚಾರ ಹಾಕಿತ್ತು. ಆದರೆ ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ಟೀಮ್ ಇಂಡಿಯಾ ಸಾಧಿಸಿದ ಗೆಲುವು ಸರಣಿಯಲ್ಲಿ 2-2ಕ್ಕೆ ತಂದು ನಿಲ್ಲಿಸಿದೆ. ಅದಕ್ಕೂ ಮಿಗಿಲಾಗಿ ದಕ್ಷಿಣ ಆಫ್ರಿಕಾದ ಆತ್ಮವಿಶ್ವಾಸಕ್ಕೆ ಕೊಡಲಿಯೇಟು ನೀಡಿದೆ.
ಟೀಮ್ ಇಂಡಿಯಾ ಈ ಸರಣಿಯ ನಾಲ್ಕೂ ಪಂದ್ಯಗಳಲ್ಲೂ ಮೊದಲು ಬ್ಯಾಟಿಂಗ್ ಮಾಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಟಾರ್ಗೆಟ್ ನೀಡಿ ಸೋತ್ರೆ, ಕೊನೆಯ ಎರಡು ಪಂದ್ಯಗಳಲ್ಲಿ ಎದುರಾಳಿಯನ್ನು ಟಾರ್ಗೆಟ್ ಮುಟ್ಟದಂತೆ ಮಾಡಿ ವಿಜಯಯಾತ್ರೆ ನಡೆಸಿತು. ಹೀಗಾಗಿ ಟೀಮ್ ಇಂಡಿಯಾದ ಪಾಲಿಗೆ ಟಾಸ್ ಕೇವಲ ಪಂದ್ಯದ ಭಾಗವಷ್ಟೇ . ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾವನ್ನು ಹೇಗೆ ಕಟ್ಟಿಹಾಕಬೇಕು ಅನ್ನುವ ಚಿಂತೆಯಲ್ಲಿದೆ.
ಚಿನ್ನಸ್ವಾಮಿ ಮೈದಾನ ಆಟ ಆರಂಭವಾಗುವುದಕ್ಕೆ ಮುನ್ನವೇ ಅಭಿಮಾನಿಗಳಿಂದ ತುಂಬಿ ತುಳಕಲಿದೆ. ಫುಲ್ ಹೌಸ್ ಸ್ಟೇಡಿಯಂನಲ್ಲಿ ಕೇವಲ ಟೀಮ್ ಇಂಡಿಯಾ, ಟೀಮ್ ಇಂಡಿಯಾ ಅನ್ನುವ ಜಪ ಮಾತ್ರ ಕೇಳಿಸಲಿದೆ. ಪ್ರೇಕ್ಷಕರು ಪಂತ್ ಬಳಗದ 12ನೇ ಆಟಗಾರರಾಗಿ ಕೆಲಸ ಮಾಡಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೂ ಜಯ ನಮ್ಮದೆ ಜೊತೆಗೆ ಕಪ್ ಕೂಡ ನಮ್ದೇ.!