ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ -ಟಿ-20 ಸರಣಿಗೆ ಬಿಸಿಸಿಐ ಸಿದ್ಧತೆ..!
ಭಾರತದಲ್ಲಿ ಒಂದು ಕಡೆ ಕೋವಿಡ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ಇದ್ರ ಬೆನ್ನಲ್ಲೇ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯ ವೇಳಾಪಟ್ಟಿಯನ್ನು ಸಿದ್ಧಪಡಿಸುತ್ತಿದೆ.
ಈ ಹಿಂದೆ ನಿಗದಿಯಾದಂತೆ ಸರಣಿ ನಡೆಯಲಿದೆ. ಆದ್ರೆ ಫೆಬ್ರವರಿ 12ರಂದು ನಡೆಯಬೇಕಿದ್ದ ಪಂದ್ಯ ಫೆಬ್ರವರಿ 13 ರಂದು ಮತ್ತು ಫೆಬ್ರವರಿ 15ರಂದು ನಿಗದಿಯಾಗಿದ್ದ ಪಂದ್ಯ ಫೆಬ್ರವರಿ 16ರಂದು ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.
ಫೆಬ್ರವರಿ 12ರಂದು 15ನೇ ಆವೃತ್ತಿಯ ಐಪಿಎಲ್ ನ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರಣದಿಂದ ಅಂದು ನಡೆಯುವ ಪಂದ್ಯವನ್ನು ಮುಂದೂಡುವ ತೀರ್ಮಾನಕ್ಕೆ ಬಿಸಿಸಿಐ ಬರಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಲಾ ಮೂರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
ಫೆಬ್ರವರಿ 6ರಿಂದ ಫೆಬ್ರವರಿ 20ರವರೆಗೆ ಪಂದ್ಯಗಳು ನಡೆಯಲಿದೆ. ಈ ಹಿಂದೆ ನಿಗದಿಯಾದಂತೆ ಅಹಮದಾಬಾದ್, ಜೈಪುರ, ಕೊಲ್ಕತ್ತಾ, ಕಟಕ್, ವಿಶಾಖಪಟ್ಟಣಂ ಮತ್ತು ತಿರುವನಂತರಪುರಂ ನಲ್ಲಿ ನಡೆಯಬೇಕಿತ್ತು.
ಆದ್ರೆ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಕದಿನ ಪಂದ್ಯವನ್ನು ಅಹಮದಾಬಾದ್ ಮತ್ತು ಟಿ-20 ಪಂದ್ಯಗಳನ್ನು ಕೊಲ್ಕತ್ತಾದಲ್ಲಿ ನಡೆಸುವ ಇರಾದೆಯಲ್ಲಿದೆ ಬಿಸಿಸಿಐ.
ಒಟ್ಟಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.