19 ವಯೋಮಿತಿ ವಿಶ್ವಕಪ್ – ಭಾರತ ಆಟಗಾರರ ದಿಟ್ಟತನ ಹೆಮ್ಮೆಯನ್ನುಂಟು ಮಾಡಿದೆ – ವಿವಿಎಸ್ ಲಕ್ಷ್ಮಣ್
19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಒತ್ತಡಕ್ಕೆ ಸಿಲುಕಿದೆ. ಈಗಾಗಲೇ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿರುವ ಭಾರತ ಕಿರಿಯರ ತಂಡ ಉಗಾಂಡ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
ಈ ಹಿಂದೆ ಐರ್ಲೆಂಡ್ ವಿರುದ್ಧ ಭಾರತ ತಂಡ ಭರ್ಜರಿಯಾಗಿ ಜಯ ಸಾಧಿಸಿತ್ತು. 17 ಮಂದಿಯ ತಂಡದಲ್ಲಿ ನಾಯಕ ಯಶ್ ಧೂಳ್ ಮತ್ತು ಉಪನಾಯಕ ಸೇರಿದಂತೆ ಆರು ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ 11 ಮಂದಿ ಆಟಗಾರರು ಮಾತ್ರ ಆಡಿದ್ದು, ಹೆಚ್ಚುವರಿ ಆಟಗಾರರು ಕೂಡ ಇರಲಿಲ್ಲ.
ಈ ನಡುವೆ ಉಗಾಂಡ ವಿರುದ್ಧದ ಪಂದ್ಯಕ್ಕೆ ನಾಯಕ ಯಶ್ ಧೂಳ್ ಮತ್ತು ಶೇಖ್ ರಶೀದ್ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ. ಇದು ಶುಕ್ರವಾರ ಸಂಜೆ ವೇಳೆಗೆ ಗೊತ್ತಾಗಲಿದೆ.
ಒಟ್ಟಿನಲ್ಲಿ ಭಾರತ 19 ವಯೋಮಿತಿ ವಿಶ್ವಕಪ್ ತಂಡದಲ್ಲಿ ಯುವ ಆಟಗಾರರು ಮಾನಸಿಕವಾಗಿ ಕುಗ್ಗಲಿಲ್ಲ. ತಂಡದ ಆರು ಮಂದಿ ಆಟಗಾರರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ರೂ ಕೂಡ ಎದೆಗುಂದದೆ ಐರ್ಲೆಂಡ್ ವಿರುದ್ಧ ಆಡಿದ ರೀತಿಗೆ ಎನ್‍ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಿರಿಯ ಆಟಗಾರರು ಪ್ರಬುದ್ಧತೆಯಿಂದ ಆಡಿದ್ದಾರೆ. ಆಟಗಾರರು ನೀಡಿರುವ ದಿಟ್ಟತನ ನನಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಲಕ್ಷ್ಮಣ್ ಹೇಳಿದ್ದಾರೆ.