ಆಸ್ಟ್ರೇಲಿಯಾದ ಸ್ಟೈಲಿಸ್ಟ್ ಪ್ಲೇಯರ್ ಡೇವಿಡ್ ವಾರ್ನರ್ ಟಿ-20 ಕ್ರಿಕೆಟ್ ನಲ್ಲಿ ಅಬ್ಬರದ ಆಟ ಮುಂದುವರೆಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಮಾಡುವ ಈ ಪ್ಲೇಯರ್ ಆರಂಭದ ಪಂದ್ಯಗಳಲ್ಲಿ ಮಂಕಾಗಿ ಕಂಡು ಬಂದರೂ, ಬಳಿಕ ಲಯಕ್ಕೆ ಮರಳಿ ತಂಡಕ್ಕೆ ನೆರವಾಗುತ್ತಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲೂ ವಾರ್ನರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನಡೆಸಿ ಅಬ್ಬರಿಸಿದ್ದಾರೆ.

ಹೌದು.. ಈ ಬಾರಿ ವಾರ್ನರ್ ಆರ್ಭಟಿಸಿದ್ದು ಯಾರ ಮೇಲೆ ಅಂದುಕೊಂಡಿರಾ.. ಅವರೇ ಮುನ್ನಡೆಸಿದ್ದ ಮಾಜಿ ತಂಡ ಸನ್‍ರೈಸರ್ಸ್ ಹೈದರಾಬಾದ್ ತಂಡದ ಮೇಲೆ. ಫಾರ್ಮ್ ಕೈ ಕೊಟ್ಟಿದ್ದರಿಂದ ವಾರ್ನರ್ ಅವರಿಂದ ನಾಯಕತ್ವವನ್ನು ಎಸ್‍ಆರ್‍ಎಚ್ ಕಳೆದ ಬಾರಿ ಕಸಿದುಕೊಂಡಿತ್ತು. ಅಲ್ಲದೆ ಕೆಲವು ಪಂದ್ಯಗಳಲ್ಲಿ ಅವರನ್ನು ಹೊರಗೆ ಕೂರಿಸಿತ್ತು. ಇದೆಲ್ಲಾ ಮನಸ್ಸಿನಲ್ಲಿಟ್ಟುಕೊಂಡ ವಾರ್ನರ್ ಐಪಿಎಲ್ ಬಳಿಕ ನಡೆದ ಟಿ-20 ವಿಶ್ವಕಪ್ ಕ್ರಿಕೆಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಕೆಗಳಿಗೆ ಉತ್ತರ ನೀಡಿದ್ದರು. ಅಲ್ಲದೆ ಸರಣಿಯಲ್ಲಿ ಗರಿಷ್ಠ ರನ್ ಸಾಧನೆಯ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.
ಆದರೂ, ಸಹ ಸನ್ ತಂಡ ಅವರನ್ನು ಉಳಿಸಿಕೊಳ್ಳದೆ ಗೇಟ್ ಪಾಸ್ ನೀಡಿತ್ತು. ಈ ಬಗ್ಗೆ ಡೇವಿಡ್ ವಾರ್ನರ್ ತುಟಿ ಬಿಚ್ಚಿರಲಿಲ್ಲ. ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದರು. ಅದು ತಮ್ಮ ಮಾಜಿ ತಂಡದ ವಿರುದ್ಧ ಅಬ್ಬರಿಸಿದ್ದು ವೈಯಕ್ತಿಕವಾಗಿ ಅವರಿಗೆ ಖುಷಿ ನೀಡಿರಬಹುದು.
ಹೈದರಾಬಾದ್ ದಂತಹ ಬಲಿಷ್ಠ ಬೌಲಿಂಗ್ ವಿಭಾಗಕ್ಕೆ ಪೆಟ್ಟು ನೀಡಿದ ವಾರ್ನರ್ ಅಮೋಘ ಬ್ಯಾಟಿಂಗ್ ನಡೆಸಿದರು. ಗುರುವಾರ ನಡೆದ ಪಂದ್ಯದಲ್ಲಿ ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಬಿಗ್ ಇನ್ನಿಂಗ್ಸ್ ಕಟ್ಟಿದ ವಾರ್ನರ್ ಅಬ್ಬರಿಸಿದರು. ಇವರು 58 ಎಸೆತಗಳಲ್ಲಿ 158.62ರ ಸರಾಸರಿಯಲ್ಲಿ ಅಜೇಯ 92 ರನ್ ಬಾರಿಸಿದರು.

ಈ ಮೂಲಕ ವಾರ್ನರ್ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ನಮೂದಿಸಿಕೊಂಡರು. ಒಟ್ಟಾರೆ ಟಿ-20 ಕ್ರಿಕೆಟ್ ನಲ್ಲಿ ವಾರ್ನರ್ ಅರ್ಧಶತಕ ಬಾರಿಸಿದ ಲೆಕ್ಕಾಚಾರದಲ್ಲಿ ಮೊದಲನೇ ಸ್ಥಾನದಲ್ಲಿ ನಿಂತುಕೊಂಡಿದ್ದಾರೆ. ಇವರು ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ದಾಖಲೆಯನ್ನು ಮೀರಿ ನಿಂತಿದ್ದಾರೆ.
ಕ್ರಿಸ್ ಗೇಲ್ ಒಟ್ಟಾರೆ ಟಿ-20 ಕ್ರಿಕೆಟ್ ನಲ್ಲಿ 88 ರನ್ ಸಿಡಿಸಿದ್ದಾರೆ. ಹೈದರಾಬಾದ್ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿದ ವಾರ್ನರ್ ಅರ್ಧಶತಕ ಬಾರಿಸಿ, ಈ ದಾಖಲೆ ಅಳಿಸಿದರು. ಇವರ ಖಾತೆಯಲ್ಲಿಗ 89 ಅರ್ಧಶತಕ ಸೇರಿವೆ. ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (77), ಆಸ್ಟ್ರೇಲಿಯಾದ ಏರಾನ್ ಫಿಂಚ್ (70), ರೋಹಿತ್ ಶರ್ಮಾ (69) ಕಾಣಿಸಿಕೊಂಡಿದ್ದಾರೆ.