Under-19 World Cup 2022 – ಯಶ್ ಧೂಳ್ ಬಳಗಕ್ಕೆ ಟಿಪ್ಸ್ ನೀಡಿದ ವಿರಾಟ್ ಕೊಹ್ಲಿ

ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕಿಂತ ಮುನ್ನವೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಲು ಲೈಸನ್ಸ್ ಪಡೆದುಕೊಳ್ಳುವ ಅರ್ಹತೆ ಪಡೆದುಕೊಂಡಿದ್ದರು.
ಹೌದು, 2008ರ 19 ವಯೋಮಿತಿ ವಿಶ್ವಕಪ್ ಟೂರ್ನಿಯನ್ನು ಗೆದ್ದ ಭಾರತ ತಂಡದ ಮುಖ್ಯ ರೂವಾರಿ ವಿರಾಟ್ ಕೊಹ್ಲಿ. ಆಗ ವಿರಾಟ್ ಹಾಗೂ ತಂಡದ ಆಟಗಾರರಿಗೆ ಸಚಿನ್ ತೆಂಡುಲ್ಕರ್ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು.
ಇದೀಗ 2022ರಲ್ಲಿ ವಿರಾಟ್ ಕೊಹ್ಲಿ ಅಂದು ಸಚಿನ್ ತೆಂಡುಲ್ಕರ್ ಮಾಡಿದ್ದ ಕೆಲಸವನ್ನು ಮಾಡಿದ್ದಾರೆ. ಹೌದು, ಫೆಬ್ರವರಿ 4ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ನ ಯುವ ಆಟಗಾರರು ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಯಶ್ ಧೂಳ್ ಬಳಗ ವಿರಾಟ್ ಕೊಹ್ಲಿಯವರ ಜೊತೆ ಮಾತನಾಡಿದ್ದಾರೆ. ಝೂಮ್ ಮೀಟಿಂಗ್ ನಲ್ಲಿ ಭಾರತದ ಕಿರಿಯ ಆಟಗಾರರಿಗೆ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ.
Under-19 World Cup 2022 – Virat Kohli shares pearls of wisdom with Yash Dhull team
ಒಬ್ಬ ನಾಯಕನಾಗಿ ತಂಡವನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದಕ್ಕೆ ಆಧುನಿಕ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಉತ್ತಮ ನಿದರ್ಶನ. ನಾಯಕನಾಗಿ ವಿರಾಟ್ ಐಸಿಸಿ ಟ್ರೋಫಿಗಳನ್ನು ಗೆಲ್ಲದೇ ಇರಬಹುದು. ಆದ್ರೆ 19ರ ವಿಶ್ವಕಪ್ ಗೆಲ್ಲುವಲ್ಲಿ ವಿರಾಟ್ ನಾಯಕತ್ವ ಮತ್ತು ಆಟದ ವೈಖರಿ ಯಾವ ಮಟ್ಟದಲ್ಲಿತ್ತು ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅದೇ ಆತ್ಮವಿಶ್ವಾಸ ಮತ್ತು ಆಕ್ರಮಣಕಾರಿ ಪ್ರವೃತ್ತಿಯಿಂದ ಇಂದು ವಿರಾಟ್ ವಿಶ್ವ ಕ್ರಿಕೆಟ್ ನ ಅಗ್ರಮಾನ್ಯ ಕ್ರಿಕೆಟಿಗನಾಗಿ ಹೊರಹೊಮ್ಮಲು ಸಾಧ್ಯವಾಯ್ತು.
ಹಾಗಂತ ವಿರಾಟ್ ಕೊಹ್ಲಿ ಭಾರತ ಕಿರಿಯರ ತಂಡದ ಜೊತೆ ಮಾತನಾಡುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದಿನ ವಿಶ್ವಕಪ್ ನಲ್ಲೂ ವಿರಾಟ್ ಕೊಹ್ಲಿ ಆಟಗಾರರ ಜೊತೆ ಸಂವಾದ ನಡೆಸಿದ್ದಾರೆ.
ಬದುಕು ಮತ್ತು ಕ್ರಿಕೆಟ್ ನ ಬಗ್ಗೆ ವಿರಾಟ್ ಕೊಹ್ಲಿ ಭಾಯಿಯಿಂದ ಸಾಕಷ್ಟು ತಿಳಿದುಕೊಂಡಿದ್ದೇನೆ. ವಿರಾಟ್ ಭಾಯಿ ಜೊತೆಗಿನ ಸಂವಾದ ಸಾಕಷ್ಟು ಸಹಾಯವಾಗಲಿದೆ ಎಂದು ಯುವ ವೇಗಿ ರಾಜ್ಯವರ್ಧನ್ ಹಂಗಾರ್ಕೆರ್ ಅವರು ಹೇಳಿದ್ದಾರೆ. ಹಾಗೇ ವಿಶ್ವದ ಆಲ್ ಟೈಮ್ ಗ್ರೇಟ್ ಕ್ರಿಕೆಟರ್ ನಿಂದ ಅಮೂಲ್ಯ ಸಲಹೆ ಸಿಕ್ಕಿದೆ ಎಂದು ಸ್ಪಿನ್ನರ್ ಕುಶಾಲ್ ತಂಬೆ ಹೇಳಿದ್ದಾರೆ.
ಇನ್ನು ತಂಡದ ಕೋಚ್ ಹೃಷಿಕೇಶ್ ಕಾನಿಟ್ಕರ್ ಕೂಡ ವಿರಾಟ್ ಜೊತೆಗಿನ ಸಂವಾದ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ನಾಲ್ಕು ಬಾರಿ 19 ವಯೋಮಿತಿ ವಿಶ್ವಕಪ್ ಗೆದ್ದಿರುವ ಭಾರತ ತಂಡ ಐದನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ. ಇನ್ನು 2016ರಿಂದ ಸತತವಾಗಿ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ ಸಾಧನೆಯನ್ನು ಭಾರತ ಕಿರಿಯರ ತಂಡ ಮಾಡಿದೆ.