Laver Cup tennis 2022 – ಲಾವೆರ್ ಕಪ್ ಟೆನಿಸ್ – ಪ್ರತಿಸ್ಪರ್ಧಿಗಳಲ್ಲ.. ಜೊತೆಯಾಗಿ ಆಡಲಿದ್ದಾರೆ ರಫೆಲ್ – ಫೆಡರರ್
ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್.. ವಿಶ್ವ ಟೆನಿಸ್ ಜಗತ್ತಿನಲ್ಲಿ ಬದ್ಧ ವೈರಿಗಳಂತೆ ಕಾದಾಟ ನಡೆಸುತ್ತಾರೆ. ನಡಾಲ್ ಮತ್ತು ಫೆಡರರ್ ನಡುವಿನ ಆಟವನ್ನು ನೋಡುವುದು ಚೆಂದ. ನಡಾಲ್ ಆಕ್ರಮಣಕಾರಿ ಪ್ರವೃತ್ತಿಯಿಂದ ಆಡುತ್ತಿದ್ರೆ, ಫೆಡರರ್ ಅವರು ತಾಳ್ಮೆಯಿಂದಲೇ ಆಡಿ ಗಮನ ಸೆಳೆಯುತ್ತಾರೆ.
ಸದ್ಯ ರಫೆಲ್ ನಡಾಲ್ ಅವರು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದು ಇತಿಹಾಸ ಬರೆದಿದ್ದಾರೆ. ಆದ್ರೆ ರೋಜರರ್ ಫೆಡರರ್ ಅವರ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಓಟ 20ರಲ್ಲೇ ನಿಂತಿದೆ. ಇನ್ನೊಂದೆಡೆ ನೊವಾಕ್ ಜಾಕೊವಿಕ್ ಕೂಡ 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅದೇನೇ ಇರಲಿ, ಫೆಡರರ್ ಮತ್ತು ನಡಾಲ್ ಮೈದಾನದಲ್ಲಿ ಪ್ರತಿಸ್ಪರ್ಧೆಗೆ ನಿಂತ್ರೆ ಸೋಲನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದ್ರೆ ಮೈದಾನದ ಹೊರಗಡೆ ಫೆಡರರ್ ಮತ್ತು ನಡಾಲ್ ಅವರು ಆಪ್ತ ಸ್ನೇಹಿತರು ಎಂಬುದು ಅಷ್ಟೇ ಸತ್ಯ.
Laver Cup tennis 2022 – Roger Federer and Rafael Nadall play in the Laver Cup.
ಸಿಂಗಲ್ಸ್ ನಲ್ಲಿ ಜಿದ್ದಾಜಿದ್ದಿನಿಂದ ಹೋರಾಟ ನಡೆಸುತ್ತಿರುವ ಇವರಿಬ್ಬರು ಡಬಲ್ಸ್ ನಲ್ಲಿ ಜೊತೆಯಾಗಿ ಆಡಿದ್ರೆ ಹೇಗಿರಬಹುದು ? ಹೌದು, ಈ ಪ್ರಶ್ನೆಗೆ 2017ರಲ್ಲೇ ಉತ್ತರ ಸಿಕ್ಕಿದೆ. ಲಾವೆರ್ ಕಪ್ ಟೂರ್ನಿಯ ಡಬಲ್ಸ್ ನಲ್ಲಿ ಆಡಿದ್ದಲ್ಲದೇ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು.
ಪ್ರತಿಷ್ಠಿತ ಲಾವೆರ್ ಕಪ್ ಟೆನಿಸ್ ಟೂರ್ನಿಯು ಮುಂದಿನ ಸೆಪ್ಟಂಬರ್ ನಲ್ಲಿ ನಡೆಯಲಿದೆ. ಕಳೆದ ವರ್ಷವೇ ನಡಾಲ್ ಅವರು ಜೊತೆಯಾಗಿ ಆಡುವ ಬಗ್ಗೆ ಸುಳಿವು ಕೂಡ ನೀಡಿದ್ದರು. ಇದೀಗ ರೋಜರ್ ಫೆಡರರ್ ಮತ್ತು ನಡಾಲ್ ಡಬಲ್ಸ್ ನಲ್ಲಿ ಯುರೋಪ್ ತಂಡದ ಪರವಾಗಿ ಆಡುತ್ತಿದ್ದಾರೆ.
ಈಗಾಗಲೇ ರಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಅವರು ತಮ್ಮ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ನಡುವೆ ರೋಜರ್ ಫೆಡರರ್ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಆಡಿರಲಿಲ್ಲ. ಹಾಗೇ ರಫೆಲ್ ನಡಾಲ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ನಡಾಲ್ ಚೇತರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸೆಪ್ಟಂಬರ್ ನಲ್ಲಿ ಈ ಶತಮಾನದ ಶ್ರೇಷ್ಠ ಆಟಗಾರರು ಜೊತೆಯಾಗಿ ಆಡುವ ಕ್ಷಣವನ್ನು ನೋಡಿ ಆನಂದಿಸಬಹುದು.