ಶ್ರೇಷ್ಠ ಆಟದ ಪ್ರದರ್ಶನ ನೀಡಿದ ಯೂ ಮುಂಬಾ ತಂಡ, ಪ್ರೊ ಕಬಡ್ಡಿ ಪಂದ್ಯಾವಳಿಯ 78 ನೇ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದ ವಿರುದ್ಧ 11 ಅಂಕಗಳ ಭರ್ಜರಿ ಜಯ ಸಾಧಿಸಿತು.
ವಿಜೇತ ಯೂ ಮುಂಬಾ ತಂಡದ ಆಟಗಾರರು 45 ಅಂಕ ಸೇರಿಸಿದರೆ, ಪರಾಜತ ಬೆಂಗಳೂರು ಬುಲ್ಸ್ ತಂಡದ ಆಟಗಾರರು 34 ಅಂಕ ಗಳಿಸಿದರು. ವಿರಾಮದ ವೇಳೆಗೆ ಯೂ ಮುಂಬಾ ತಂಡ ಎರಡು ಅಂಕಗಳ ಮುನ್ನಡೆ ಸಾಧಿಸಿತ್ತು. ಯೂ ಮುಂಬಾ 22 ಅಂಕ ಸೇರಿಸಿದ್ದರೆ, ಬೆಂಗಳೂರು ಬುಲ್ಸ್ ತಂಡ 20 ಗಳಿಸಿತ್ತು.
ಯೂ ಮುಂಬಾ ತಂಡದ ಪರ ರೈಡರ್ ಅಭಿಷೇಕ ಸಿಂಗ್ ಹನ್ನೊಂದು, ಡಿಫೆಂಡರ್ ರಾಹುಲ್ ಸತ್ಯಪಾಲ್ ಎಂಟು, ರೈಡರ್ ವಿ.ಅಜಿತ್ ಎಂಟು, ಡಿಫೆಂಡರ್ ರಿಂಕು ನಾಲ್ಕು, ಡಿಫೆಂಡರ್ ಹರಿಂದರ್ ಕುಮಾರ್ ಮೂರು, ಫಜಲ್ ಮೂರು, ಆಲ್‌ರೌಂಡರ್ ಅಜಿಂಕ್ಯ ಕಾಪರೆ ಒಂದು ಅಂಕ ಗಳಿಸಿದರು.
ಪರಾಜಿತ ಬೆಂಗಳೂರು ಬುಲ್ಸ್ ತಂಡದ ಪರ ರೈಡರ್ ಪವನ್ ಶೇರಾವತ್ ಹದಿನಾಲ್ಕು, ಭರತ್ ಏಳು, ಡಿಫೆಂಡರ್ ಸೌರಭ್ ನಂದಾಲ್ ನಾಲ್ಕು, ಅಮನ್ ಎರಡು ಹಾಗೂ ದೀಪಕ್ ನರ್ವಾನ್ ಒಂದು ಅಂಕ ಗಳಿಸಿದರು.
ಈ ಪಂದ್ಯದ ನಂತರ ಬೆಂಗಳೂರು ಬುಲ್ಸ್ ತಂಡ ಹದಿನೈದು ಪಂದ್ಯಗಳನ್ನು ಆಡಿ ಎಂಟು ಪಂದ್ಯಗಳಲ್ಲಿ ಜಯ, ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಒಟ್ಟು 46 ಅಂಕಗಳೊಂದಿಗೆ ಸದ್ಯ ಅಗ್ರ ಸ್ಥಾನದಲ್ಲಿದೆ.
ಯೂ ಮುಂಬಾ ತಂಡ ಹದಿಮೂರು ಪಂದ್ಯಗಳನ್ನು ಆಡಿ ಐದು ಪಂದ್ಯಗಳಲ್ಲಿ ಜಯ ಮೂರು ಪಂದ್ಯಗಳಲ್ಲಿ ಸೋಲು ಹಾಗೂ ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಒಟ್ಟು 41 ಅಂಕಗಳೊಂದಿಗೆ ಸದ್ಯ ನಾಲ್ಕನೇ ಸ್ಥಾನದಲ್ಲಿದೆ.