T20 CWC 2022 ಟೂರ್ನಿಯ ಆರಂಭದಿಂದಲೇ ಅಚ್ಚರಿಯ ಫಲಿತಾಂಶದಿಂದ ಕುತೂಹಲ ಕೆರಳಿಸಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು, ಸೌತ್ ಆಫ್ರಿಕಾ ವಿರುದ್ಧದ ಸೂಪರ್-12 ಪಂದ್ಯದಲ್ಲಿ ನೆದರ್ಲೆಂಡ್ಸ್ 13 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158 ರನ್ಗಳ ಪೈಪೋಟಿಯ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳ ವೈಫಲ್ಯದಿಂದಾಗಿ 20 ಓವರ್ಗಳಲ್ಲಿ 8 ವಿಕೆಟ್ಗೆ 145 ರನ್ಗಳಿಸುವ ಮೂಲಕ 13 ರನ್ಗಳ ಸೋಲೊಪ್ಪಿಕೊಂಡಿತು. ಈ ಸೋಲಿನೊಂದಿಗೆ ಸೌತ್ ಆಫ್ರಿಕಾ ತಂಡದ ಸೆಮೀಸ್ ಹಾದಿ ದುರ್ಗಮಗೊಂಡಿದೆ. ಒಂದು ಹಂತದಲ್ಲಿ ಸುಲಭವಾಗಿ ಸೆಮೀಸ್ ಪ್ರವೇಶದ ಅವಕಾಶ ಹೊಂದಿದ್ದ ಸೌತ್ ಆಫ್ರಿಕಾ, ಸತತ ಎರಡು ಪಂದ್ಯಗಳ ಸೋಲಿನಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ನೆದರ್ಲೆಂಡ್ಸ್ ಭರ್ಜರಿ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಮೆಬರ್ಗ್(37) ಹಾಗೂ ಮ್ಯಾಕ್ ಓಡೌಡ್(29) ಮೊದಲ ವಿಕೆಟ್ಗೆ 58 ರನ್ಗಳ ಉತ್ತಮ ಆರಂಭ ನೀಡಿದರು. ನಂತರ ಕಣಕ್ಕಿಳಿದ ಟಾಮ್ ಕೂಪರ್(35) ಬಿರುಸಿನ ಬ್ಯಾಟಿಂಗ್ ಮೂಲಕ ಅಬ್ಬರಿಸಿದರೆ. ಆ್ಯಕ್ರಮನ್(41*) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ 158 ರನ್ಗಳನ್ನ ಕಲೆಹಾಕಿತು. ಸೌತ್ ಆಫ್ರಿಕಾ ಪರ ಮಹಾರಾಜ್ 2, ನೋಕಿಯಾ ಹಾಗೂ ಮಾರ್ಕ್ರಂ ತಲಾ 1 ವಿಕೆಟ್ ಪಡೆದರು.
ಸೌತ್ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ
ನೆದರ್ಲೆಂಡ್ಸ್ ನೀಡಿದ 159 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕರಾಗಿ ಕಣಕ್ಕಿಳಿದ ಡಿಕಾಕ್(13) ಹಾಗೂ ನಾಯಕ ತೆಂಬಾ ಬವುಮಾ(20) ಅಲ್ಪಮೊತ್ತಕ್ಕೆ ಹೊರನಡೆದರೆ. ನಂತರ ಕಣಕ್ಕಿಳಿದ ರೋಸ್ಸೋ(25), ಮಾರ್ಕ್ರಂ(17) ಹಾಗೂ ಮಿಲ್ಲರ್(17) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್(21) ಹಾಗೂ ಕೇಶವ್ ಮಹಾರಾಜ್(13) ರನ್ಗಳಿಸಿದರು ತಂಡಕ್ಕೆ ಆಸರೆಯಾಗಲಿಲ್ಲ. ಸಂಘಟಿತ ಬೌಲಿಂಗ್ ದಾಳಿ ನಡೆಸಿದ ನೆದರ್ಲೆಂಡ್ಸ್ ಪರ ಬ್ರೆಂಡನ್ ಗ್ಲೋವರ್ 3, ಕ್ಲಾಸೆನ್ ಹಾಗೂ ಡಿಲಿಡೆ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.