t-20 cricket- ಟಿ-20 ಕ್ರಿಕೆಟ್ ನಲ್ಲಿ 100ನೇ ಪಂದ್ಯ ಗೆದ್ದ ಭಾರತ- ಅಗ್ರ ಸ್ಥಾನದಲ್ಲಿದೆ ಪಾಕಿಸ್ತಾನ..!

ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ತವರಿನಲ್ಲಿ ಏಕದಿನ ಮತ್ತು ಟಿ-20 ಸರಣಿಯನ್ನು ಗೆದ್ದುಕೊಂಡಿದೆ. ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಟೀಮ್ ಇಂಡಿಯಾ ಈಗ ಟಿ-20 ಸರಣಿಯಲ್ಲೂ ಕೆರೆಬಿಯನ್ನರಿಗೆ ವೈಟ್ ವಾಶ್ ಮಾಡಲು ತುದಿಗಾಲಿನಲ್ಲಿ ನಿಂತಿದೆ.
ಈ ನಡುವೆ, ಟೀಮ್ ಇಂಡಿಯಾ ವಿಶ್ವ ಟಿ-20 ಕ್ರಿಕೆಟ್ ನಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟಿ-20 ಪಂದ್ಯವನ್ನು ರೋಹಿತ್ ಬಳಗ ಎಂಟು ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಸಂಖ್ಯೆಯನ್ನು 100ಕ್ಕೇರಿಸಿಕೊಂಡಿದೆ.
ಅಲ್ಲದೆ ವಿಶ್ವ ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ತಂಡ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾ ಪಾತ್ರವಾಗಿದೆ. ಈ ಹಿಂದೆ ಪಾಕಿಸ್ತಾನ ಈ ರೀತಿಯ ಸಾಧನೆ ಮಾಡಿ ಸದ್ಯ ಅಗ್ರ ಸ್ಥಾನದಲ್ಲಿದೆ. ಪಾಕಿಸ್ತಾನ 119 ಟಿ-20 ಪಂದ್ಯಗಳನ್ನು ಗೆದ್ದುಕೊಂಡಿದೆ. ಒಟ್ಟು 189 ಪಂದ್ಯಗಳನ್ನು ಆಡಿದ್ದು, 64 ಪಂದ್ಯಗಳನ್ನು ಸೋತಿದೆ. ಐದು ಪಂದ್ಯಗಳು ರದ್ದುಗೊಂಡಿವೆ. t-20 cricket – India script history in 2nd T20I, become second team achieve unique milestone
ಇನ್ನು ಟೀಮ್ ಇಂಡಿಯಾ ಒಟ್ಟು 155 ಪಂದ್ಯಗಳನ್ನು ಆಡಿದೆ. ಇದರಲ್ಲಿ 55 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ನಾಲ್ಕು ಪಂದ್ಯಗಳ ಫಲಿತಾಂಶ ಬಂದಿಲ್ಲ. ಇನ್ನೊಂದು ವಿಶೇಷತೆ ಏನು ಅಂದ್ರೆ ಮೂರು ಪಂದ್ಯಗಳಲ್ಲಿ ಬಾಲೌಟ್ – ಸೂಪರ್ ಓವರ್ ನಲ್ಲಿ ಜಯ ಸಾಧಿಸಿದೆ.
ಇನ್ನು ಟಿ-20 ಗೆಲುವಿನ ಸರಾಸರಿಯಲ್ಲಿ ಅಫಘಾನಿಸ್ತಾನ ಅಗ್ರ ಸ್ಥಾನದಲ್ಲಿದೆ. ಅಫಘಾನಿಸ್ತಾನ 67.97 ಸರಾಸರಿಯಲ್ಲಿ ಟಿ-20 ಪಂದ್ಯಗಳನ್ನು ಗೆದ್ದುಕೊಂಡ್ರೆ, ಟೀಮ್ ಇಂಡಿಯಾ 65.23ರ ಸರಾಸರಿಯಲ್ಲಿ ಜಯ ಸಾಧಿಸಿದೆ.
ಟೀಮ್ ಇಂಡಿಯಾ ತನ್ನ ಚೊಚ್ಚಲ ಟಿ-20 ಪಂದ್ಯದಲ್ಲೇ ಬಾಲ್ ಔಟ್ ನಿಯಮದ ಪ್ರಕಾರ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಇದೀಗ ನೂರನೇ ಪಂದ್ಯದ ಗೆಲುವನ್ನು ವೆಸ್ಟ್ ಇಂಡೀಸ್ ವಿರುದ್ದ ದಾಖಲಿಸಿದೆ.