ಟೀಮ್ ಇಂಡಿಯಾದ ಅಭಿನವ ಗೋಡೆ ಖ್ಯಾತಿಯ ಚೇತೇಶ್ವರ ಪೂಜಾರಾ ಇತ್ತೀಚಿನ ದಿನಗಳಲ್ಲಿ ಬಿರುಕು ಬಿಟ್ಟ ಗೋಡೆಯಂತಾಗಿದ್ದಾರೆ. ತಂಡಕ್ಕೆ ಅಗತ್ಯವಿರುವಾಗ ಪೂಜಾರಾ ಔಟಾಗುವುದು ಮಾಮೂಲಾಗಿದೆ. ಹೀಗಾಗಿ ಅವರ ಟೆಸ್ಟ್ ಸ್ಥಾನದ ಬಗ್ಗೆ ಸಂಶಯಗಳಿವೆ.
ರನ್ ಬರ ನೀಗಿಸಿಕೊಳ್ಳಲು ಪೂಜಾರಾ ರಣಜಿ ಮೈದಾನಕ್ಕಿಳಿದಿದ್ದರು. ಈ ಮೂಲಕ ಆಯ್ಕೆಗಾರರಿಗೆ ತನ್ನಲ್ಲಿನ ಕಸುವು ಕಡಿಮೆ ಆಗಿಲ್ಲ ಅನ್ನುವುದನ್ನು ತಿಳಿಸುವ ಕನಸು ಕಂಡಿದ್ದರು. ರಾಜ್ಕೋಟ್ನಲ್ಲಿ ಪೂಜಾರಾ ಸೌರಾಷ್ಟ್ರ ಪರ ಮುಂಬೈ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಆಡಿದ ಮೊದಲ ಇನ್ನಿಂಗ್ಸ್ನಲ್ಲೇ ಪೂಜಾರಾ ಶೂನ್ಯ ಸುತ್ತಿದ್ದಾರೆ. ಈ ಮೂಲಕ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುತ್ತಾರೋ ಇಲ್ಲವೋ ಅನ್ನುವ ಪ್ರಶ್ನೆ ಹುಟ್ಟಿದೆ.
95 ಟೆಸ್ಟ್ ಪಂದ್ಯಗಳ ಅನುಭವಿ ಚೇತೇಶ್ವರ ಪೂಜಾರಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮುಗ್ಗರಿಸಿದ್ದರು. ಸತತ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಪೂಜಾರಾ ಜೊತೆಗೆ ಮತ್ತೊಬ್ಬ ಅನುಭವಿ ಅಜಿಂಕ್ಯಾ ರಹಾನೆ ಸ್ಥಾನವೂ ಟೀಮ್ ಇಂಡಿಯಾದಲ್ಲಿ ಅಲ್ಲಾಡುತ್ತಿತ್ತು. ಆದರೆ ರಹಾನೆ ಸೌರಾಷ್ಟ್ರ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲ ಶತಕ ಸಿಡಿಸಿ ಆಯ್ಕೆಗಾರರಿಗೆ ಮೆಸೇಜ್ ಕೊಟ್ಟಿದ್ದಾರೆ. ಆದರೆ ಪೂಜಾರಾ ವೈಫಲ್ಯ ಕಂಡಿದ್ದಾರೆ.
ಪೂಜಾರಾ ಸ್ಥಾನಕ್ಕೆ ಹಲವು ಯುವ ಆಟಗಾರರ ಹೆಸರು ಕೇಳಿ ಬರುತ್ತಿದೆ. ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಟೆಸ್ಟ್ ತಂಡದಲ್ಲಿ ಖಾಯಂ ಆಟಗಾರನಾಗಲು ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಪೂಜಾರಾ ರಣಜಿಯಲ್ಲೂ ವೈಫಲ್ಯ ಕಂಡಿರುವುದು ಆಯ್ಕೆಗಾರರಲ್ಲೇ ಪ್ರಶ್ನೆ ಹುಟ್ಟಿಸಿದೆ ಅನ್ನುವುದು ಸುಳ್ಳಲ್ಲ.