ಇದು ಈ ಸೀಸನ್ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯ. ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳಲ್ಲಿ 8 ಅಂಕ ಪಡೆದು 7ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ 9 ಪಂದ್ಯಗಳಲ್ಲಿ 10 ಅಂಪ ಪಡೆದು 5ನೇ ಸ್ಥಾನದಲ್ಲಿದೆ. ಹೀಗಾಗಿ ಬ್ರೊಬೋರ್ನ್ ಪೈಟ್ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲುವು ಅನಿವಾರ್ಯ. ಸನ್ ರೈಸರ್ಸ್ ಹೈದ್ರಾಬಾದ್ಗೆ ಟಾಪ್ 4ಕ್ಕೇರುವ ತವಕ.
ಸನ್ ರೈಸರ್ಸ್ ಮೊದಲ 2 ಪಂದ್ಯವನ್ನು ಸೋತಿತ್ತು. ನಂತರ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಈಗ ಮತ್ತೆ ಸತತ 2 ಪಂದ್ಯಗಳನ್ನು ಕಳೆದುಕೊಂಡಿದೆ. ಮತ್ತೊಂದು ಕಡೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತವಾಗಿ 2 ಪಂದ್ಯವನ್ನು ಈ ಟೂರ್ನಿಯಲ್ಲಿ ಗೆದ್ದಿಲ್ಲ. ಡೆಲ್ಲಿ ಒಂದು ಪಂದ್ಯವನ್ನು ಗೆದ್ದು ಈ ಪಂದ್ಯಕ್ಕೆ ಸಿದ್ಧವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ನಲ್ಲಿ ಫೈರ್ ಪವರ್ ಇದೆ. ಪೃಥ್ವಿ ಷಾ ಮತ್ತು ಡೇವಿಡ್ ವಾರ್ನರ್ ಆರಂಭದಲ್ಲೇ ಎದುರಾಳಿ ಬೌಲರ್ ಗಳನ್ನು ಚಿಂದಿ ಉಡಾಯಿಸುತ್ತಾರೆ. ಮಿಚೆಲ್ ಮಾರ್ಷ್ ಮತ್ತು ರಿಷಬ್ ಪಂತ್ ಆಟದಲ್ಲಿ ಎಷ್ಟು ಬಾಲ್ ನಲ್ಲಿ ಎಷ್ಟು ರನ್ ಬಂತು ಅನ್ನುವುದಷ್ಟೇ ಕಾಣುತ್ತದೆ. ಲಲಿತ್ ಯಾದವ್ ತಂಡ ಕುಸಿದರೆ ಶಕ್ತಿ ನೀಡುವ ಬ್ಯಾಟರ್. ರೋವ್ಮನ್ ಪೊವೆಲ್ ಬಿಗ್ ಸಿಕ್ಸ್ ಹಿಟ್ಟರ್. ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಬ್ಯಾಟಿಂಗ್ನಲ್ಲೂ ಬಲ ಹೊಂದಿದ್ದಾರೆ. ಇಷ್ಟಾದರೂ ಡೆಲ್ಲಿ ಕಡೆಯಿಂದ ಸ್ಥಿರ ಪ್ರದರ್ಶನ ಬಂದಿಲ್ಲ.
ಬೌಲಿಂಗ್ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಹಿಂದಿಲ್ಲ. ಮುಸ್ತಾಫಿಝುರ್ ಮತ್ತು ಚೇತನ್ ಸಕಾರಿಯಾ ವೆರೈಟಿ ಗಳಿಂದ ಮಿಂಚಿದ್ದಾರೆ. ಅಕ್ಸರ್ ಮತ್ತು ಕುಲ್ ದೀಪ್ ಎಡಗೈ ಸ್ಪಿನ್ ಬಲೆ ಹೆಣೆದಿದ್ದಾರೆ. ಶಾರ್ದೂಲ್ ಸರಿಯಾದ ಸಮಯಕ್ಕೆ ವಿಕೆಟ್ ಕೊಟ್ಟಿದ್ದಾರೆ. ಲಲಿತ್ ಯಾದವ್ ಕೂಡ ಚೆಂಡು ತಿರುಗಿಸಿದ್ದಾರೆ.
ಸನ್ ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೊಂಚ ರನ್ ಬರ ಎದುರಿಸುತ್ತಿದ್ದಾರೆ. ಆದರೆ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಮಿಂಚಿನ ಆಟ ಆಡಿದ್ದಾರೆ. ಏಡಿಯನ್ ಮಾರ್ಕ್ ರಾಂ ಮತ್ತು ನಿಕೊಲಸ್ ಪೂರನ್ ಸಿಕ್ಸರ್, ಬೌಂಡರಿಗಳ ಸರದಾರರು. ಶಶಾಂಕ್ ಸಿಂಗ್ ಸ್ಪೋಟಕ ಆಟಕ್ಕೆ ಫೇಮಸ್. ವಾಷಿಂಗ್ಟನ್ ಸುಂದರ್ ಫಿಟ್ ಆಗದೇ ಇದ್ದರೆ ಜೆ ಸುಚಿತ್ ತಂಡ ಸೇರ್ತಾರೆ.
ಬೌಲಿಂಗ್ ವಿಚಾರಕ್ಕೆ ಬಂದರೆ ಭುವನೇಶ್ವರ್ ಲೈನ್ ಅಂಡ್ ಲೆಂಗ್ತ್ ಸಿಕ್ಕಾಪಟ್ಟೆ ಯಶಸ್ಸು ಕೊಟ್ಟಿದೆ. ಮಾರ್ಕೋ ಜೆನ್ಸನ್ ಸ್ವಿಂಗ್ ಮತ್ತು ಬೌನ್ಸ್ ಮೂಲಕ ಕಾಡಿದ್ದಾರೆ. ಉಮ್ರನ್ ಮಲಿಕ್ ವೇಗ ಈಗಾಗಲೇ ಮನೆ ಮಾತಾಗಿದೆ. ನಟರಾಜನ್ ಫಿಟ್ ಆಗದೇ ಇದ್ದರೆ ಕಾರ್ತಿಕ್ ತ್ಯಾಗಿ ಅವಕಾಶ ಪಡೆಯುವುದು ಖಚಿತ. ಸ್ಪಿನ್ ಅಸ್ತ್ತ್ರವಾಗಿ ಸುಂದರ್ ಅಥವಾ ಸುಚಿತ್ ಇದ್ದಾರೆ. ಮಾರ್ಕ್ ರಾಂ ಮತ್ತು ಶಶಾಂಕ್ ಸಿಂಗ್ ಕೂಡ ಬೌಲಿಂಗ್ ನಲ್ಲಿ ಕೈ ಜೋಡಿಸ್ತಾರೆ.
ಬ್ರೆಬೋರ್ನ್ ಮೈದಾನದಲ್ಲಿ ರನ್ ಸುರಿಮಳೆಯಾಗಿದೆ. ಹೀಗಾಗಿ ಬಿಗ್ ಹಿಟ್ಟರ್ ಗಳ ಮೇಲೆ ಕಣ್ಣಿದೆ. ಇಬ್ಬನಿ ಕಾಟ ಕಡಿಮೆ ಆಗಿರುವುದರಿಂದ ಟಾಸ್ ಮಹತ್ವ ಕಡಿಮೆ ಆಗಿದೆ.