ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ನಲ್ಲಿ ದೊರೆತ ಭರ್ಜರಿ ಗೆಲುವಿನ ಬಳಿಕ ಹೊಸ ಉತ್ಸಾದಲ್ಲಿರುವ ಅತಿಥೇಯ ಶ್ರೀಲಂಕಾ(Sri Lanka) ಹಾಗೂ ಪ್ರವಾಸಿ ಪಾಕಿಸ್ತಾನ(Pakistan) ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಲಿದೆ.
ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶ್ರೀಲಂಕಾದ ಗಾಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಆಸೀಸ್ ವಿರುದ್ಧ ದೊರೆತ ಭರ್ಜರಿ ಗೆಲುವಿನಿಂದ ಅತಿಥೇಯ ಲಂಕಾ ತಂಡ ಹೊಸ ಉತ್ಸಾಹದಲ್ಲಿದ್ದರೆ. ತವರಿನಲ್ಲಿ ನಡೆದ ಆಸೀಸ್ ವಿರುದ್ಧದ ಟೆಸ್ಟ್ ಸರಣಿ(Test Series) ಸೋಲಿನ ಬಳಿಕ ದ್ವೀಪ ರಾಷ್ಟ್ರದ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ಪಾಕಿಸ್ತಾನ ಸಹ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುತ್ತಿದೆ.
ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್(ICC Test Championship) ಪಾಯಿಂಟ್ಸ್ ಟೇಬಲ್ನಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ಉಭಯ ತಂಡಗಳು, ಈ ಸರಣಿಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿವೆ. ಆ ಮೂಲಕ ಮುಂದಿನ ವರ್ಷ ನಡೆಯುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಿಸುವ ಗುರಿ ಹೊಂದಿವೆ. ಶ್ರೀಲಂಕಾಕ್ಕೆ ತವರಿನಲ್ಲಿ ಆಡುತ್ತಿರುವ ಲಾಭವಿದ್ದು, ಇದೇ ಲೆಕ್ಕಾಚಾರದೊಂದಿಗೆ ಪಾಕಿಸ್ತಾನವನ್ನ ಮಣಿಸುವ ಉತ್ಸಾಹ ಹೊಂದಿದ್ದರೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನ ಹೊಂದಿರುವ ಪಾಕ್ ತಂಡ ಸಹ ಅತಿಥೇಯರನ್ನ ಸೋಲಿಸುವ ತವಕದಲ್ಲಿದೆ.
ಅತಿಥೇಯ ಶ್ರೀಲಂಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಇದರೊಂದಿಗೆ ಧನಂಜಯ ಡಿಸಿಲ್ವಾ ಸಹ ತಂಡಕ್ಕೆ ಮರಳಿರುವುದು, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನ ಇನ್ನಷ್ಟು ಬಲಿಷ್ಠಗೊಳಿಸಿದೆ. ಸರಣಿ ಆರಂಭಕ್ಕು ಮೊದಲೇ ಪ್ಲೇಯಿಂಗ್ ಇಲವೆನ್ ಘೋಷಣೆ ಮಾಡಿದ್ದ ಪಾಕಿಸ್ತಾನ ಸಹ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಯುವ ಆಟಗಾರ ಸಲ್ಮಾನ್ ಅಘಾ ತಮ್ಮ ಚೊಚ್ಚಲ ಪಂದ್ಯವಾಡುವ ನಿರೀಕ್ಷೆಯಲ್ಲಿದ್ದಾರೆ.
ಶ್ರೀಲಂಕಾ ತಂಡ: ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿಸಿಲ್ವಾ, ದಿನೇಶ್ ಚಂಡಿಮಾಲ್, ನಿರೋಶನ್ ಡಿಕ್ವೆಲ್ಲಾ, ರಮೇಶ್ ಮೆಂಡಿಸ್, ಮಹೇಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ಸಲ್ಮಾನ್ ಅಘಾ, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ.
SL v PAK : ಅತಿಥೇಯ ಶ್ರೀಲಂಕಾಗೆ ಪಾಕಿಸ್ತಾನದ ಸವಾಲು