ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿ ಮುಕ್ತಾಯದ ಬಳಿಕ ಅತಿಥೇಯ ಶ್ರೀಲಂಕಾ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಆಸೀಸ್ ವಿರುದ್ಧ ನಡೆಯಲಿರುವ 2 ಪಂದ್ಯಗಳ ಸರಣಿಗಾಗಿ ಶ್ರೀಲಂಕಾ 18 ಮಂದಿ ಆಟಗಾರರ ತಂಡವನ್ನ ಪ್ರಕಟಿಸಿದೆ.
ಎರಡು ತಂಡಗಳ ನಡುವಿನ ಮೊದಲ ಟೆಸ್ಟ್ ಗಾಲೆಯಲ್ಲಿ ಜೂ.29ರಿಂದ ಆರಂಭವಾಗಲಿದೆ. ಇದಕ್ಕಾಗಿ ತಂಡವನ್ನ ಪ್ರಕಟಿಸಿರುವ ಶ್ರೀಲಂಕಾ, ಲೆಗ್ ಸ್ಪಿನ್ನರ್ ಜೆಫ್ರಿ ವ್ಯಾಂಡರ್ಸೆ ಅವರನ್ನ ಮತ್ತೊಮ್ಮೆ ತಂಡಕ್ಕೆ ಕರೆತಂದಿದೆ. 2018ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿದ್ದ 32 ವರ್ಷದ ವ್ಯಾಂಡರ್ಸೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ದೊರೆಯದೆ ನಿರಾಸೆ ಅನುಭವಿಸಿದ್ದರು. ಇದೀಗ ನಾಲ್ಕು ವರ್ಷದ ಬಳಿಕ ಮತ್ತೊಮ್ಮೆ ತಂಡಕ್ಕೆ ಮರಳಿರುವ ಲೆಗ್ ಸ್ಪಿನ್ನರ್, ತವರಿನಂಗಳದಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡುವ ತವಕದಲ್ಲಿದ್ದಾರೆ. ದಿಮುತ್ ಕರುಣಾರತ್ನೆ ನಾಯಕತ್ವದಲ್ಲಿ ಮುನ್ನಡೆಯಲಿರುವ ಶ್ರೀಲಂಕಾ, ಟೆಸ್ಟ್ ಸರಣಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಪ್ರಮುಖವಾಗಿ ಬಲಿಷ್ಠ ಸ್ಪಿನ್ ವಿಭಾಗವನ್ನು ಕಟ್ಟಿಕೊಂಡಿರುವ ಲಂಕಾ ತಂಡದಲ್ಲಿ ವ್ಯಾಂಡರ್ಸೆ, ಲಸಿತ್ ಎಂಬುಲ್ದೇನಿಯಾ, ರಮೇಶ್ ಮಂಡಿಸ್ ಹಾಗೂ ಪ್ರವೀಣ್ ಜಯವಿಕ್ರಮ ತಂಡದ ಪ್ರಮುಖ ಸ್ಪಿನ್ನರ್‌ಗಳಾಗಿದ್ದಾರೆ.

ಮತ್ತೊಂದೆಡೆ ಇದೇ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅನುಭವಿಗಳಾದ ಏಂಜೆಲೋ ಮ್ಯಾಥ್ಯೂಸ್, ದಿನೇಶ್ ಚಂದಿಮಾಲ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಶ್ರೀಲಂಕಾ ಬಲಿಷ್ಠ ಯುವ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದು, ಪತುಮ್ ನಿಸ್ಸಂಕ, ಕುಸಲ್ ಮೆಂಡಿಸ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಉಭಯ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜೂ.29ರಂದು ಗಾಲೆಯಲ್ಲಿ ನಡೆಯಲಿದೆ.
ಶ್ರೀಲಂಕಾ ಟೆಸ್ಟ್ ತಂಡ:
ದಿಮುತ್ ಕರುಣಾರತ್ನೆ(ನಾಯಕ), ಪತುಮ್ ನಿಸ್ಸಂಕ, ಒಶಾದ್ ಫೆರ್ನಾಂಡೊ, ಏಂಜೆಲೋ ಮ್ಯಾಥ್ಯೂಸ್, ಕುಸಲ್ ಮೆಂಡಿಸ್, ಧನಂಜಯ ಡಿಸಿಲ್ವಾ, ಕುಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ದಿನೇಶ್ ಚಂದಿಮಾಲ್, ರಮೇಶ್ ಮಂಡಿಸ್, ಚಮಿಕಾ ಕರುಣಾರತ್ನೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಅಸಿತ್ ಫೆರ್ನಾಂಡೊ, ದಿಲ್ಶಾನ್ ಮಧುಶಂಕ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯಾ, ಜೆಫ್ರಿ ವೆಂಡರ್ಸೆ.